ಜಿಲ್ಲೆಯ-ಕುರಿತು-ಸಾಮಾಜಿಕ-ಜಾಲತಾಣಗಳಲ್ಲಿ-ಅಪಪ್ರಚಾರ

 ಮಡಿಕೇರಿ, ಮೇ 14 : ಕಳೆದ ವರ್ಷ ಸುರಿದ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗು ಪ್ರವಾಸೋದ್ಯಮಕ್ಕೆ ಇದೀಗ ಮತ್ತೊಂದು ಸವಾಲನ್ನು ಎದುರಿಸ ಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿಯೂ ಮಳೆಗಾಲದಲ್ಲಿ ದುರಂತಗಳು ಸಂಭವಿಸುತ್ತವೆ ಎಂಬಿತ್ಯಾದಿ ಆಧಾರ ರಹಿತ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬೆಳೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ.  ಇದ ರಿಂದಾಗಿ ಚೇತರಿಕೆಯ ಹಂತದಲ್ಲಿದ್ದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೆ ಕಷ್ಟ, ನಷ್ಟದ ಆತಂಕ ಎದುರಾಗಿದೆ ಎಂದು ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲೀಕರ  ಅಸೋಸಿಯೇಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಸಲಹೆಗಾರ ಜಿ.ಚಿದ್ವಿಲಾಸ್, ಕೊಡಗಿನಲ್ಲಿ ಈ ವರ್ಷದ ಮಳೆಗಾಲದಲ್ಲೂ ದುರಂತಗಳು ಸಂಭವಿಸುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್ ಈಗಾಗಲೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳು ಹಲವರ ವಿರುದ್ಧ ಮೊಕದ್ದಮೆ ಹೂಡಿ ಕ್ರಮಕೈಗೊಳ್ಳುವ ದಾಗಿ ಹೇಳಿದ್ದಾರೆ.

ಕಳೆದ ಸಾಲಿನ ಆಗಸ್ಟ್ 16 ರ ಬಳಿಕ ಜಿಲ್ಲೆಯಲ್ಲಿ ಮಹಾಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಸಂದರ್ಭ ಅಸೋಸಿಯೇಷನ್ ವಿಕೋಪ ಪರಿಹಾರ ಕಾರ್ಯದಲ್ಲಿ ನಿರತ ಅಧಿಕಾರಿಗಳು, 
(ಮೊದಲ ಪುಟದಿಂದ) ಸಿಬ್ಬಂದಿಗಳಿಗಾಗಿ 2 ಸಾವಿರ ಕೊಠಡಿಗಳನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ ನೀಡಿದ್ದಲ್ಲದೆ, ಆ ಹಂತದಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿತ್ತು ಎಂದು ಚಿದ್ವಿಲಾಸ್ ಗಮನ ಸೆಳೆದರು.
ಕರ್ನಾಟಕ ಪ್ರವಾಸೋದ್ಯಮ ರಾಯಭಾರಿ ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವರ ಮೂಲಕ ಕೊಡಗಿನ ಪ್ರವಾಸ ಸುರಕ್ಷಿತವೆಂದು ತಿಳಿಸಲಾಯಿತು. ಕೊಡಗಿನ ಪ್ರವಾಸದಿಂದ ಯಾವದೇ ತೊಂದರೆಗಳಿಲ್ಲವೆಂದು ವಿವಿಧ ಭಾಷಿಕ ಪ್ರವಾಸಿಗರ ಮೂಲಕ ಹೊರಜಿಲ್ಲೆ, ರಾಜ್ಯಗಳ ಪ್ರವಾಸಿಗರಲ್ಲಿ ಜಾಗೃತಿಯನ್ನು ಮೂಡಿಸಿ ಆಕರ್ಷಿಸುವ ಪ್ರಯತ್ನಗಳು ನಡೆಯಿತು. ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಅವರ ಸಹಕಾರದೊಂದಿಗೆ ಕೊಡಗಿನ ಪ್ರವಾಸ ಅತ್ಯಂತ ಸುರಕ್ಷಿತ ಎಂದು ಬಿಂಬಿಸುವ ವೀಡಿಯೋ ಚಿತ್ರೀಕರಣದ ಮೂಲಕ ದೇಶದಾದ್ಯಂತ ಪ್ರಚಾರ ಮಾಡಿ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಅತ್ಯಂತ ಪ್ರಮಾಣಿಕವಾದ ಪ್ರಯತ್ನಗಳನ್ನು ಮಾಡಲಾಗಿತ್ತು ಎಂದು ಅವರು ಸ್ಮರಿಸಿಕೊಂಡರು.
ಎಲ್ಲಾ ಪ್ರಯತ್ನಗಳ ನಡುವೆ ಪ್ರವಾಸೋದ್ಯಮ ಒಂದಷ್ಟು ಪ್ರಗತಿಯನ್ನು ಕಾಣುತ್ತಿದೆ ಎನ್ನುವ ಹಂತದಲ್ಲೆ ಇದೀಗ, ಯಾವದೇ ನೈಜಾಂಶಗಳಿಲ್ಲದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಆತಂಕ ಸೃಷ್ಟಿಸಲಾಗುತ್ತಿದೆ. ಕೊಡಗಿನೆಡೆಗೆ ಪ್ರವಾಸ ಹೋಗುವದೇ ಬೇಡ ಎನ್ನುವ ಭಾವನೆಯನ್ನು ಮೂಡಿಸಲಾಗುತ್ತಿದ್ದು, ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಪ್ರವಾಸೋದ್ಯಮ ಕ್ಷೇತ್ರ ಸುರಕ್ಷಿತವಾಗಿದ್ದು, ಇದರ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಚಿದ್ವಿಲಾಸ್ ಮನವಿ ಮಾಡಿದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಸಹಾಯಕ ನಿರ್ದೇಶಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಅಧಿಕಾರಿಯ ನೇಮಕ ಮಾಡಬೇಕು ಮತ್ತು ಈ ಹಿಂದೆ ನಿರ್ಧರಿಸಿರುವಂತೆ ಪ್ರವಾಸೋದ್ಯಮದ ಕುರಿತು ‘ಮಾಹಿತಿ ಕೇಂದ್ರÀ’ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಚಿದ್ವಿಲಾಸ್ ಒತ್ತಾಯಿಸಿದರು.
ಉಪಾಧ್ಯಕ್ಷ ಜಾಹೀರ್ ಅಹಮ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಉಪಹಾರ ಗೃಹ, ವಸತಿ ಗೃಹಗಳು, ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೂಲಕ  ಅಂದಾಜು 1 ಲಕ್ಷಕ್ಕೂ ಹೆಚ್ಚಿನ ಮಂದಿ ಬದುಕು ಕಟ್ಟಿ ಕೊಂಡಿದ್ದಾರೆ. ಪ್ರಸ್ತುತ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ತಪ್ಪು ಮಾಹಿತಿಗಳಿಂದ ಇವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗಿನ ಆರ್ಥಿಕ ಮೂಲವಾಗಿದ್ದ ಕಾಫಿ, ಏಲಕ್ಕಿ, ಕರಿಮೆಣಸು ದರಗಳು ನೆಲಕಚ್ಚಿರುವ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವನ್ನೆ ಆರ್ಥಿಕ ಸ್ಥಿರತೆಗೆ ನೆಚ್ಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು  ಮನವಿ ಮಾಡಿದರು. ಜಿಲ್ಲೆಯ ಆರ್ಥಿಕ  ಭದ್ರತೆಗೆ ಪ್ರವಾಸೋದ್ಯಮ ಪರ್ಯಾಯ ಮಾರ್ಗವಾಗಿದ್ದು, ಅದು ನೆಲ ಕಚ್ಚಿದರೆ ಜಿಲ್ಲೆಯ ಸ್ಥಿತಿ ಊಹಿಸಲು ಅಸಾಧ್ಯ ಎಂದರು.
ಜಿಲ್ಲೆಯ ಪ್ರವಾಸೋದ್ಯಮ ಸಂಕಷ್ಟಕ್ಕೆ ಸಿಲುಕಿರುವದರಿಂದ ಜಿಲ್ಲೆಯ ಹೊಟೇಲ್, ರೆಸ್ಪೋರೆಂಟ್, ಹೋಂಸ್ಟೇ ಮಾಲೀಕರು,  ಬೆಳೆಗಾರರು ಸಾಲದಲ್ಲಿ ಮುಳುಗಿದ್ದಾರೆ. ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯುವ ಸಮೂಹ ಜಿಲ್ಲೆಯಿಂದ ಹೊರ ತೆರಳುತ್ತಿದ್ದು, ಪ್ರವಾಸೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಸ್ಪಂದಿಸಬೇಕಿದೆ ಎಂದರು.
ಪ್ರವಾಸೋದ್ಯಮ ಮುಖ್ಯ ಆಕರ್ಷಣೆಗಳಾದ ಮಡಿಕೇರಿಯ ಪುಟಾಣಿ ರೈಲು, ದುಬಾರೆಯ ರಿವರ್ ರ್ಯಾಫ್ಟಿಂಗ್, ಕಕ್ಕಬೆಯ ತಡಿಯಂಡಮೋಳ್ ಚಾರಣವನ್ನು ಪುನರಾರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಇದೇ ಸಂದರ್ಭ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಆಸೀಫ್ ಉಪಸ್ಥಿತರಿದ್ದರು. 

Home    About us    Contact