-ಕೊಡಗಿಗೊಂದು-ಮಾದರಿ-ಸರಕಾರಿ-ಶಾಲೆ
ಮಡಿಕೇರಿ, ಮೇ 20: ಕೊಡಗು ಜಿಲ್ಲೆಯ ಮಟ್ಟಿಗೆ ಯಾವದೇ ಖಾಸಗಿ ಶಾಲೆಗಳಲ್ಲಿ ಇಲ್ಲದಂತಹ ಮೂಲಭೂತ ಸೌಕರ್ಯದೊಂದಿಗೆ ಸರಕಾರಿ ಶಾಲೆಯೊಂದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊಳ್ಳುತ್ತಿದೆ. ಶತಮಾನದ ಇತಿಹಾಸವಿರುವ ಈ ಸರಕಾರಿ ಶಾಲೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ಸ್, ಬೆಂಗಳೂರು ಉದ್ದಿಮೆ (ಬಿಇಎಲ್) ಈ ಕೊಡುಗೆ ನೀಡಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಸರಕಾರಿ ಪ.ಪೂ. ಕಾಲೇಜು ಆವರಣದೊಳಗೆ ಈ ಸರಕಾರಿ ಪ್ರಾಥಮಿಕ ಶಾಲೆಯು ಇದುವರೆಗೆ ಹರುಕು - ಮುರುಕು ಕೊಠಡಿಗಳ ನಡುವೆ ಸಾಗುತ್ತಿತ್ತು. ಬದಲಾಗಿ ಎರಡು ವರ್ಷ ಹಿಂದೆಯೇ ಬಿಇಎಲ್ ಸಂಸ್ಥೆ ನೂತನ ಕಟ್ಟಡ ನಿರ್ಮಾಣದಲ್ಲಿ ತೊಡಗಿತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿದಾಗ, ಈ ಶಾಲಾ ಕಟ್ಟಡವನ್ನು ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡು; ಸಂತ್ರಸ್ತರಿಗಾಗಿ ಹರಿದು ಬಂದಿದ್ದ ನೆರವಿನ ವಸ್ತುಗಳನ್ನು ಇರಿಸಲು ಗೋದಾಮು ಮಾಡಿಕೊಂಡಿತ್ತು.
ಈಗಾಗಲೇ ದಾಸ್ತಾನು ಎಲ್ಲಾ ಖಾಲಿಯಾಗಿದ್ದು, ಬಿಇಎಲ್ ಸಂಸ್ಥೆ ಮತ್ತೆ ಕಟ್ಟಡದ ನವೀಕರಣದಲ್ಲಿ ತೊಡಗಿದೆ. ಒಟ್ಟು 12 ಕೊಠಡಿಗಳನ್ನು ಒಳಗೊಂಡಿರುವ ಎಲ್ಲಾ ಮೂಲಭೂತ ಸೌಕರ್ಯದಿಂದ ಕೂಡಿದ ಕಟ್ಟಡ ಇದಾಗಿದೆ. ವಿಶೇಷವೆಂದರೆ ಇಡೀ ಶಾಲೆಗೆ ನೂತನ ಪೀಠೋಪಕರಣ ಸಹಿತ ಬೆಂಚು, ಕುರ್ಚಿ, ಕಪ್ಪು ಹಲಗೆ, ಮೇಜು ಸೇರಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಿಂದ (ಜೂನ್ 1 ರಿಂದ) ಈ ಶಾಲೆಯ ಮಕ್ಕಳಿಗೆ ಹೊಸತನದ ಅನುಭವವಾಗಲಿದೆ. ಮಾತ್ರವಲ್ಲದೆ ಎಲ್ಲಾ 12 ಕೊಠಡಿಗಳಿಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ವಿದ್ಯುತ್ ದೀಪ ಹಾಗೂ ನಾಲ್ಕು ಫ್ಯಾನ್‍ಗಳನ್ನು ಅಳವಡಿಸಲಾಗಿದೆ.
ಬಿಇಎಲ್ ಉದ್ದಿಮೆ ಪರವಾಗಿ ಕಾಮಗಾರಿ ಇಂಜಿನಿಯರ್ ಮಿಥುನ್ ಹೇಳುವಂತೆ;  ಇಷ್ಟೆಲ್ಲ ಕಾಮಗಾರಿಯನ್ನು ಗುಣಮಟ್ಟ ಕಾಯ್ದುಕೊಂಡು ಅಂದಾಜು ರೂ. 1.98 ಕೋಟಿ ವೆಚ್ಚದಲ್ಲಿ ಪೂರೈಸಲಾಗಿದೆ. ಸಂಸ್ಥೆಯು ತನ್ನ ವಾರ್ಷಿಕ ಲಾಭಾಂಶದಲ್ಲಿ ಶೇ. 2 ರಷ್ಟು ಹಣವನ್ನು ಈ ರೀತಿ ಸಮಾಜಮುಖಿ ಕಾರ್ಯಕ್ಕೆ ಬಳಸುತ್ತಿದೆ; ಆ ಮುಖಾಂತರ ಕೊಡಗಿನಲ್ಲಿ ಪ್ರಥಮವಾಗಿ ಸರಕಾರಿ ಶಾಲೆಯೊಂದು ಒಂದು ಮಾದರಿ ವಿದ್ಯಾಲಯವಾಗಿ ರೂಪುಗೊಂಡಿದೆ. ಸಂಬಂಧಿಸಿದ ಶಿಕ್ಷಣ ಇಲಾಖೆ, ಶಾಲಾ ಅಧ್ಯಾಪಕ ವೃಂದ, ಪೋಷಕ ಮಂಡಳಿ ಹಾಗೂ ಪುಟಾಣಿ ಮಕ್ಕಳು ಈ ಸುಂದರ ಶಾಲೆಯ ನಿರ್ವಹಣೆಯನ್ನು  ಸಮರ್ಪಕವಾಗಿ ನೋಡಿಕೊಳ್ಳಬೇಕಷ್ಟೆ.

Home    About us    Contact