-ಕೊಡಗು:-ಸೇನೆ-ಕ್ರೀಡೆ-ಮತ್ತು-ವಿದ್ಯೆ
ಒಂದು ಅವಲೋಕನ
ಕೊಡಗಿನವರು ಅಪ್ರತಿಮ ಸೇನಾನಿಗಳು. ಇದರಲ್ಲಿ ಎರಡು ಮಾತಿಲ್ಲ. ಕೊಡಗನ್ನು ಆಳಿದ ಅಂದಿನ ರಾಜರು ಕೊಡಗಿನವರ ಯುದ್ಧ ಪರಾಕ್ರಮ ಮತ್ತು ಸೇವಾ ನಿಷ್ಠೆಗೆ ಮೆಚ್ಚಿ ಎಲ್ಲಾ ಕುಟುಂಬಗಳಿಗೂ ಎರಡೆರಡು ಒಡಿಕತ್ತಿಗಳನ್ನು ನೀಡಿದ್ದು, ಅದು ಇಂದಿಗೂ ಐನ್‍ಮನೆಗಳಲ್ಲಿ ಪೌರುಷದ ಸಂಕೇತವಾಗಿ ಹಬ್ಬಹರಿದಿನಗಳಲ್ಲಿ ಪೂಜಿಸಲ್ಪಡುತ್ತಿದೆ. ಅಂತೆಯೇ ಬ್ರಿಟಿಷರ ವಿರುದ್ಧ ದಂಗೆಯೆದ್ದು, ಅಮರ ಸುಳ್ಯ ಕಾಟಕಾಯಿಯಂತಹ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಸಂಗಡಿಗರ ಪ್ರಯತ್ನ ಅಪೂರ್ವವಾದದ್ದು. ಮುಂದೆ ನಡೆದ ಒಂದನೇ ವಿಶ್ವ ಮಹಾಯುದ್ಧ, ಎರಡನೇ ವಿಶ್ವ ಮಹಾಯುದ್ಧಗಳು, 1962 ರ ಚೈನಾ ವಿರುದ್ಧದ ಯುದ್ಧ, 1965 ರ ಭಾರತ - ಪಾಕಿಸ್ತಾನದ ನಿರ್ಣಾಯಕ ಯುದ್ಧ, 1971 ರ ಬಾಂಗ್ಲಾ ವಿಮೋಚನಾ ಯುದ್ಧ, ಇತ್ತೀಚಿನ ಕಾರ್ಗಿಲ್ ಯುದ್ಧಗಳಲ್ಲಿ ನಮ್ಮ ಜಿಲ್ಲೆಯ ಯೋಧರು ವೀರಾವೇಶದಿಂದ ಹೋರಾಡಿರುವದು ಸ್ತುತ್ಯಾರ್ಹವಾದುದು.
ತೀರಾ ಇತ್ತೀಚಿನ ಸರ್ಜಿಕಲ್ ದಾಳಿಯ ನಂತರದ ವೀರ ಪೈಲಟ್ ಅಭಿನಂದನ್‍ರಂತೆಯೇ 1971 ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಮ್ಮ ಕೊಡಗಿನ ಹೆಮ್ಮೆಯ ಪುತ್ರ ಪೈಲೆಟ್ ಮಂಡೇಪಂಡ ಅಪ್ಪಚ್ಚು ಗಣಪತಿಯವರು ತಾವು ಚಲಾಯಿಸುತ್ತಿದ್ದ ‘ನ್ಯಾಟ್’ (ಉಓಂಖಿ) ಎಂಬ ಪುಟ್ಟ ಯುದ್ಧ ವಿಮಾನದ ಮೂಲಕ ಪಾಕಿಸ್ತಾನದವರ ಅಮೇರಿಕಾ ನಿರ್ಮಿತವಾದ ‘ಸೆಬರ್‍ಜೆಟ್’ ಎನ್ನುವ ಅಂದಿನ ಅತ್ಯಾಧುನಿಕ ಯುದ್ಧ ವಿಮಾನವನ್ನು ಹೊಡೆದುರುಳಿಸಿ ದೇಶಾದ್ಯಂತ ಮನೆಮಾತಾಗಿದ್ದು, ಬಹುಶಃ ಹಿರಿಯ ತಲೆಮಾರಿನವರಿಗೆ ನೆನಪಿರಬಹುದು. ಕಾಕತಾಳಿಯವೆಂಬಂತೆ ಇಂದು ಪೈಲಟ್ ಅಭಿನಂದನ್ ತಾವು ಚಲಾಯಿಸುತ್ತಿದ್ದ ಹಳೆಯ ಮಿಗ್ ಯುದ್ಧ ವಿಮಾನದ ಮೂಲಕ ಅಮೇರಿಕಾದ ಇಂದಿನ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವದು ಹೆಮ್ಮೆಯ ಸಂಗತಿ. 
ಸುಮಾರು ಎರಡು ದಶಕಗಳ ಹಿಂದಿನವರೆಗೂ ನಮ್ಮ ಪುಟ್ಟ ಜಿಲ್ಲೆಯ ಸರಿಸುಮಾರು ಎಲ್ಲಾ ಕುಟುಂಬಗಳಿಂದಲೂ ಒಬ್ಬರಲ್ಲಾ ಒಬ್ಬರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಿರುತ್ತಾರೆ. ಎಲ್ಲರಿಗೂ ಕಿರೀಟ ಪ್ರಾಯರಾದ ಜನರಲ್ ತಿಮ್ಮಯ್ಯ ಅವರು ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಧೈರ್ಯ, ಸಾಹಸ, ದೇಶಭಕ್ತಿ, ಅಪ್ರತಿಮ ಸೇವೆಯನ್ನು ಭಾರತ ದೇಶ ಮರೆಯುವಂತೆ ಇಲ್ಲ. ಈಗಲೂ ಸಹ ಕೊಡಗಿನ ಅನೇಕ ಯುವಕ-ಯುವತಿಯರು ವೀರ ಸೇನಾನಿಗಳಾಗಿ ದೇಶ ಸೇವೆಯಲ್ಲಿದ್ದಾರೆ. ಆದರೆ ಈಗ ಉನ್ನತ ವಿದ್ಯಾಭ್ಯಾಸ ಮತ್ತಿತರ ಕಾರಣಗಳಿಂದಾಗಿ ಸೇನೆಗೆ ಸೇರುವವರ ಪ್ರಮಾಣ ಸ್ವಲ್ಪ ಕಡಿಮೆಯಿರಬಹುದಾದರೂ, ಹುರುಪು, ಉತ್ಸಾಹ, ದೇಶಾಭಿಮಾನಕ್ಕೆ ಕುಂದಿಲ್ಲ.
ವಿಶೇಷವೆಂದರೆ ಕೊಡಗಿನ ಸಾಂಪ್ರದಾಯಿಕ ಉಡುಪಿನ ಜೊತೆಯಲ್ಲಿ ಎರಡೆರಡು ಆಯುಧಗಳನ್ನು ಧರಿಸಬಹುದಾಗಿದೆ. ಒಂದು ಪೀಚೆಕತ್ತಿ ಮತ್ತೊಂದು ಒಡಿಕತ್ತಿ. ಬಹುಶಃ ಕೊಡಗಿನವರನ್ನು ಹೊರತುಪಡಿಸಿದರೆ, ಪಂಜಾಬಿನ ಸಿಖ್ಖರು ಮತ್ತು ಹಿಮಾಲಯ ಪ್ರದೇಶದ ಗೂರ್ಖರು ಮಾತ್ರ ಖಡ್ಗ ಮತ್ತು ಕುಖ್ರಿಗಳೆಂಬ ಕಿರು ಆಯುಧವನ್ನು ಸಾಂಪ್ರದಾಯಿಕವಾಗಿ ಧರಿಸುವ ಹಕ್ಕನ್ನು ಹೊಂದಿರುತ್ತಾರೆ.
ಇನ್ನು ಕ್ರೀಡೆಯ ವಿಷಯಕ್ಕೆ ಬಂದರೆ, ಕೊಡಗಿನವರಿಗೆ ಇದು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಇಂದಿನವರೆಗೂ ಅಚಾನಕವಾಗಿ ಸಾಗಿ ಬಂದಿದೆ. ಹೌದು, ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ದೇವಸ್ಥಾನ ಇರುವ ಕಡೆಗಳಲ್ಲಿ, ಅದರ ಆಸು-ಪಾಸು ‘ಮಂದು’ ಎಂದು ಕರೆಯಲ್ಪಡುವ ಆಟದ ಮೈದಾನದಂತಹ ವಿಶಾಲ ಮೈದಾನವಿರುತ್ತದೆ. ಇಲ್ಲಿ ಗ್ರಾಮದ ಸಭೆ - ಸಮಾರಂಭಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಕೈಲು ಮುಹೂರ್ತ, ಹುತ್ತರಿ ಹಬ್ಬಗಳ ಸಂದರ್ಭಗಳಲ್ಲಿ ಕ್ರೀಡೆಗಳಿಂದ ತೊಡಗಿ ಕೋಲಾಟದವರೆಗೂ ಯುವಕ-ಯುವತಿಯರಿಗೆ ಕ್ರೀಡಾ ಸ್ಪೂರ್ತಿಯ ಪ್ರೋತ್ಸಾಹದಾಯಕ ಸನ್ನಿವೇಶಗಳಿರುತ್ತವೆ. ನಗರ ಪ್ರದೇಶಗಳಿಗೆ ಸೀಮಿತವಾಗಿರುವ ಸ್ಪೋಟ್ಸ್ ಸ್ಟೇಡಿಯಂ, ಕೃತಕ ಹುಲ್ಲು ಹಾಸುಗಳ ಕ್ರೀಡಾ ಸಂಕೀರ್ಣಗಳಲ್ಲಿನ  ತಳಕು-ಬಳಕಿನ ಹುಳುಕುಗಳಿಲ್ಲದ ಸ್ವಾಭಾವಿಕ ಸನ್ನಿವೇಶದ ‘ಮಂದು’ಗಳು ಇಂದು ಕೂಡ ಕೊಡಗಿನ ಗ್ರಾಮೀಣ ಯುವಕರ ಕ್ರೀಡಾತೊಟ್ಟಿಲು ಎಂದರೆ ತಪ್ಪಾಗಲಾರದು.
ಈಗ ಎರಡು ದಶಕಗಳಿಂದ ಕೊಡಗಿನಲ್ಲಿ ವಿವಿಧ ಜನಾಂಗಗಳು ತಮ್ಮ ಮನೆತನದ ಮೂಲಕ ಕ್ರೀಡಾ ಬಾಂಧವ್ಯಗಳನ್ನು ಸ್ಥಾಪಿಸುತ್ತಾ ಜಿಲ್ಲೆಯ ಒಟ್ಟು ಕ್ರೀಡಾ ಬೆಳವಣಿಗೆಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿರುವದು ಬಹುಶಃ ದೇಶಕ್ಕೆ ಮಾದರಿಯಾಗಿದೆ. ಪ್ರಮುಖವಾಗಿ ಕೊಡವ ಜನಾಂಗದವರು ನಡೆಸಿಕೊಂಡು ಬರುತ್ತಿರುವ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದೆ. ಅಂತೆಯೇ ಅರೆಭಾಷೆ ಗೌಡರ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ, ಮುಸ್ಲಿಂ ಸಮುದಾಯದವರ ನಡುವಣ ವಾಲಿಬಾಲ್, ಕ್ರಿಕೆಟ್ ಕ್ರೀಡೆಗಳು, ಗಿರಿಜನರ ಕ್ರೀಡಾಕೂಟ, ಯರವ ಸಮುದಾಯದವರ ಕ್ರೀಡಾಕೂಟ, ಅಂತೆಯೇ ಬಿಲ್ಲವ ಸಮುದಾಯದವರ, ಬಂಟ ಜನಾಂಗದವರ ಕ್ರೀಡಾಕೂಟಗಳು... ಹೆಗ್ಗಡೆ ಜನಾಂಗದವರ ಕ್ರೀಡಾಕೂಟಗಳು... ಹೀಗೆ, ತಮ್ಮ ತಮ್ಮ ಕುಲ ಬಾಂಧವರಲ್ಲಿ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಶ್ರಮಿಸುತ್ತಿರುವದು ಶ್ಲಾಘನೀಯ. ಪರಿಶ್ರಮ ಇರುವಲ್ಲಿ ಪ್ರತಿಫಲವಿರುತ್ತದೆ. ಇದರಿಂದ ಹೆಚ್ಚು ಹೆಚ್ಚು ಸಂಖ್ಯೆಯ ಗಣೇಶ್, ಗೋವಿಂದ, ಅರ್ಜುನರು, ಅಶ್ವಿನಿ ನಾಚಪ್ಪ, ಅಶ್ವಿನಿ ಪೊನ್ನಪ್ಪ, ಜ್ಯೋತ್ಸ್ನಾ ಚಿನ್ನಪ್ಪ, ರಾಬಿನ್ ಉತ್ತಪ್ಪ ರಂತಹವರು, ಮನೆಯಪಂಡ ಸೋಮಯ್ಯ, ಸುಬ್ಬಯ್ಯ, ಅರ್ಜುನ್ ದೇವಯ್ಯ, ನಿರ್ಮಲಾ ಉತ್ತಪ್ಪ ರಂತಹ ಕ್ರೀಡಾ ಪ್ರತಿಭೆಯ ಪೀಳಿಗೆ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಭರವಸೆ ಇದೆ.
ಕೊಡಗಿನ ವಿದ್ಯಾಭ್ಯಾಸದ ಬಗ್ಗೆ ವಿವರಿಸುವದಾದರೆ, ನಮ್ಮವರು ಸೈನ್ಯದಲ್ಲಿ ಶೌರ್ಯವನ್ನು ಮೆರೆದರೂ, ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇಲ್ಲವೆಂಬ ಕೊರಗು ಎರಡು ದಶಕಗಳ ಹಿಂದಿನಿಂದಲೂ ಇತ್ತು. ಕೊಡಗಿನ ಪ್ರತಿ ಮನೆಯಲ್ಲಿ ಕನಿಷ್ಟ ಹೈಸ್ಕೂಲ್ ವಿದ್ಯಾಭ್ಯಾಸ ಮಾಡದ ವ್ಯಕ್ತಿಯಿಲ್ಲವೆಂದರೆ ಅತಿಶಯೋಕ್ತಿ ಯಾಗಲಾರದು. 
ಪ್ರತಿ ನಾಲ್ಕು - ಐದು ಕಿ.ಮೀ. ದೂರಕ್ಕೊಂದು ಸರಕಾರಿ ಮಿಡಲ್ ಸ್ಕೂಲ್, ಎಂಟು - ಹತ್ತು ಕಿ.ಮೀ. ದೂರಕ್ಕೊಂದು ಹೈಸ್ಕೂಲ್ ಸ್ಥಾಪನೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸ್ಥಾಪನೆಯಾದುದನ್ನು ಕೊಡಗಿನವರು ಗರಿಷ್ಠ ಉಪಯೋಗ ಮಾಡಿಕೊಂಡು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಸರಕಾರಿ ಶಾಲೆಗಳು ಇಲ್ಲದ ಕುಗ್ರಾಮಗಳಲ್ಲಿ, ಊರಿನ ಹಿರಿಯರು, ಕೆಲವು ಧನಿಕರು ತಮ್ಮ ಮನೆಯ ಮಕ್ಕಳ ಮತ್ತು ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸ್ವತಃ ‘ಉಪಾದ್ರಿಗಳೆಂಬ’ ಮನೆ ಪಾಠದ ಶಿಕ್ಷಕರನ್ನು ಸ್ವಂತ ದುಡ್ಡಿನಿಂದ ನೇಮಿಸಿಕೊಂಡು ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು ಎಂಬದನ್ನು ಕೆಲವು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಈಗ ಕೊಡಗಿನಲ್ಲಿ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಪರಿಸ್ಥಿತಿ ಬಹಳಷ್ಟು ಸುಧಾರಿಸಿರುವದು ಸಂತಸದ ಸಂಗತಿ. ಏಕೆಂದರೆ ಸರಕಾರಿ ಶಾಲೆಗಳಿಗಿಂತ, ನಗರ ಪರಿಸರದ ರೀತಿಯಲ್ಲಿ ಉತ್ತಮ ಗುಣಮಟ್ಟದ ಖಾಸಗಿ ಶಾಲೆಗಳು ಸಾಕಷ್ಟು ಸ್ಥಾಪನೆಯಾಗಿವೆ. ಅನುಕೂಲವಂತರಿರಲಿ, ಸಾಮಾನ್ಯರಿರಲಿ, ಒಂದು ಹಂತದ ಮಟ್ಟಿಗಿನ ವಿದ್ಯಾಭ್ಯಾಸಕ್ಕೆ ಕೊಡಗು ಜಿಲ್ಲೆಯಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿದೆ. ಗುಣಮಟ್ಟದ ವಿದ್ಯಾಭ್ಯಾಸ ಪಡೆಯುವ ಯುವ ವೃಂದದ ಸಂಖ್ಯೆ ಹೆಚ್ಚಿದೆ. 
ಸ್ಥಳೀಯವಾಗಿ ಮಡಿಕೇರಿ ಯಲ್ಲಿ ವೈದ್ಯಕೀಯ ಕಾಲೇಜು, ಹತ್ತಿರದಲ್ಲಿ ಇಂಜಿನಿಯರಿಂಗ್ ಕಾಲೇಜು ಗಳಿದ್ದರೂ, ಹೆಚ್ಚಿನವರು ಮೈಸೂರು, ಬೆಂಗಳೂರು, ಮಂಗಳೂರು ನಗರಗಳಲ್ಲಿ ಓದುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 
ಹಾಗೆಯೇ ಉತ್ತಮ ವಿದ್ಯೆ ಪಡೆದು ಇಂಜಿನಿಯರ್, ಡಾಕ್ಟರ್ ಮುಂತಾದ ಪ್ರತಿಷ್ಟಿತ ಉದ್ಯೋಗ, ಕೈತುಂಬ ಸಂಬಳವನ್ನು ಪಡೆಯುತ್ತಾ ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ. ಇಷ್ಟೇ ಸಾಕೆ? ನಮ್ಮ ಯುವಕ-ಯುವತಿಯರ ಗುರಿ ತಡಿಯಂಡಮೋಳ್ ಅಥವಾ ಪುಷ್ಪಗಿರಿ ಬೆಟ್ಟವಾಗಬಾರದು. ಅದಕ್ಕಿಂತ ಉನ್ನತವಾದ ಹಿಮಾಲಯದ ಮೌಂಟ್ ಎವರೆಸ್ಟ್ ಶಿಖರವಾಗಬೇಕು! ಹೌದು ಕೊಡಗು ಜಿಲ್ಲೆಯಿಂದ ಐ.ಎ.ಎಸ್., ಐ.ಪಿ.ಎಸ್. ಮುಂತಾದ ರಾಷ್ಟ್ರ ಮಟ್ಟದ ಆಡಳಿತಾತ್ಮಕ ಸ್ಪರ್ಧೆಯಲ್ಲಿ ಉತ್ತೀರ್ಣರಾಗಿ ದೇಶ ಸೇವೆ ಮಾಡುವ ಅಧಿಕಾರಿಗಳ ಸಂಖ್ಯೆ ಬಹಳ ಕಡಿಮೆಯಿದೆ. 
ಕೊಡಗಿನ ಪ್ರಥಮ ಐ.ಎ.ಎಸ್. ಅಧಿಕಾರಿ ಚೋನಿರ ಮನೆತನದ ಮುತ್ತಮ್ಮ ಅವರು ನಮಗೆ ದಾರಿದೀಪದಂತಿದ್ದಾರೆ. ನೀವು ಈಗಾಗಲೇ ಪದವಿ ಪಡೆದವರು, ಉದ್ಯೋಗದಲ್ಲಿದ್ದವರು ಕಾಲಮಿತಿಯೊಳಗೆ ಇದ್ದವರು. 
ಈ ನಿಟ್ಟಿನಲ್ಲಿ ಪ್ರಯತ್ನ, ಮರು ಪ್ರಯತ್ನ ಮಾಡಬಹುದು. ನಿಮ್ಮ ಗುರಿ ದೊಡ್ಡದಿರಲಿ. ನಿಮ್ಮ ಪ್ರಯತ್ನಕ್ಕೆ, ಶ್ರದ್ಧೆಗೆ ತಕ್ಕ ಪ್ರತಿಫಲ ಸಿಕ್ಕುತ್ತದೆ. ಮುಂದಿನ ತಲೆಮಾರಿನ ಕಿರಿಯರಿಗೆ ಮಾರ್ಗ ದರ್ಶನವಾಗುತ್ತದೆ.
- ವಿಶ್ವನಾಥ್, ಎಡಿಕೇರಿ.
 
 
 
 
 
 
 

Home    About us    Contact