ಕೊಡಗಿನಲ್ಲಿ-ಮಳೆಯಿಂದ-90-ಮನೆಗಳಿಗೆ-ಪೂರ್ಣ-ಹಾನಿ

ಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ತಾ. 3ರಿಂದ ಇದುವರೆಗೆ ಧಾರಾಕಾರ ಸುರಿದಿರುವ ಆಶ್ಲೇಷ ಮಳೆಯ ಆರ್ಭಟದೊಂದಿಗೆ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಹಿತ ಇತರ ಹೊಳೆ, ತೋಡುಗಳ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ 90 ವಾಸದ ಮನೆಗಳು ಸಂಪೂರ್ಣ ಹಾನಿಗೊಂಡಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ 147 ಮನೆಗಳಿಗೆ ಭಾಗಶಃ ಹಾನಿ ಗೊಂಡಿರುವ ಬಗ್ಗೆ ಗ್ರಾ.ಪಂ. ಹಂತದ ಕಂದಾಯ ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯಿಂದ ಗೊತ್ತಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ತೋರದಲ್ಲಿ ಶೋಧ : ತಾ. 9ರಂದು ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಕಣ್ಮರೆಯಾಗಿರುವ ಇನ್ನು ಏಳು ಮಂದಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಎಲ್ಲೆಡೆ ಮಳೆಯ ತೀವ್ರತೆ ಕಡಿಮೆಯಾಗಿರುವ ಕಾರಣ ಕಾರ್ಯಾಚರಣೆ ಸ್ಥಳದಲ್ಲಿ ಹಿಟಾಚಿ ಯಂತ್ರಗಳ ಬಳಕೆಗೆ ಅಡಚಣೆ ಇದ್ದರೂ ಎನ್.ಡಿ.ಆರ್.ಎಫ್., ಪೊಲೀಸ್, ಅಗ್ನಿಶಾಮಕ, ಸೇವಾ ಸಿಬ್ಬಂದಿ ಯೊಂದಿಗೆ ನಾಗರಿಕರು ಜಂಟಿ ಪ್ರಯತ್ನ ಮುಂದುವರೆಸಿರುವದಾಗಿ ಜಿಲ್ಲಾಧಿಕಾರಿ ವಿವರಿಸಿದ್ದಾರೆ.

1507 ಜನರ ರಕ್ಷಣೆ : ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಂಕಷ್ಟ ಎದುರಾಗಿತ್ತು ಎಂದು ನೆನಪಿಸಿರುವ ಜಿಲ್ಲಾಧಿಕಾರಿ, ಸದ್ಯ ಲಭ್ಯವಾಗಿರುವ ಮಾಹಿತಿಯಂತೆ ಮಡಿಕೇರಿ ತಾಲೂಕು 32, ವೀರಾಜಪೇಟೆ 42, ಸೋಮವಾರ ಪೇಟೆ 73 ಮನೆಗಳು ಭಾಗಶಃ ಹಾನಿಯಾಗಿದ್ದು, ಮಡಿಕೇರಿ ತಾ. 15, ವೀರಾಜಪೇಟೆ 41 ಮತ್ತು ಸೋಮವಾರಪೇಟೆಯಲ್ಲಿ 34 ಮನೆಗಳು ಪೂರ್ಣ ಹಾನಿಯಾಗಿವೆ ಎಂದು ಅಂಕಿಅಂಶ ನೀಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಸುಮಾರು 1507 ಕ್ಕೂ ಹೆಚ್ಚು ಜನರು ಹಾಗೂ 19 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಭಾರತೀಯ ಸೇನೆ, ಪೊಲೀಸ್ ಇಲಾಖೆ, ಕಂದಾಯ, ಗ್ರಾಮ ಪಂಚಾಯಿತಿ ಹಾಗೂ ಪಶುಪಾಲನಾ ಇಲಾಖೆ ಸಹಕಾರ ನೀಡಿದ್ದು,
ಜಿಲ್ಲೆಯಲ್ಲಿ ಒಟ್ಟು 45 ಪರಿಹಾರ ಕೇಂದ್ರ ತೆರೆಯಲಾಗಿದೆ. 2270 ಕುಟುಂಬಗಳ 7873 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿ¸ Àಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಹಾಗೂ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸರಿಪಡಿಸುವ ಕಾರ್ಯ ಜಿಲ್ಲಾಡಳಿತ ದಿಂದ ನಡೆದಿದೆ.’ 
ಅತೀವೃಷ್ಟಿಯಿಂದಾಗಬಹುದಾದ ತೊಂದರೆಯನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ತುರ್ತು ಸಂದರ್ಭ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. 
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದು ರಸ್ತೆ ಸಂಚಾರಕ್ಕೆ ಅಡಚಣೆ ಮತ್ತು ಮರ ಬಿದ್ದು ಅಡಚಣೆ ಉಂಟಾಗಿದ್ದು, ತುರ್ತು ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಕ್ರಮವಹಿಸಲಾಗಿದೆ. 
ಜಿಲ್ಲೆಯ ಒಟ್ಟು 6 ರಸ್ತೆಗಳು ಭೂಕುಸಿತ ಹಾಗೂ ಪ್ರವಾಹದಿಂದ ಬಂದ್ ಆಗಿವೆ. ಮಡಿಕೇರಿ-ವೀರಾಜಪೇಟೆ, ಸಿದ್ದಾಪುರ-ಕರಡಿಗೋಡು, ಮಡಿಕೇರಿ-ವೀರಾಜಪೇಟೆ-ಮಾಕುಟ್ಟ, ಮೂರ್ನಾಡು-ನಾಪೋಕ್ಲು, ಸಿದ್ದಾಪುರ-ಕೊಂಡಂಗೇರಿ, ಗಾಳಿಬೀಡು-ಪಾಟಿ-ಕಾಲೂರು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಯುಕ್ತರ ಭೇಟಿ : ಮಕ್ಕಳ ಕಲ್ಯಾಣ ಆಯುಕ್ತ ಆಂಥೋನಿ ಸೆಬಸ್ಟಿನ್ ಮತ್ತು ಸದಸ್ಯರಾದ ಪರಶುರಾಮ್ (ಮೊದಲ ಪುಟದಿಂದ) ಅವರು ಮಂಗಳವಾರ ಕುಶಾಲನಗರ ಮತ್ತು ಗುಡ್ಡೆಹೊಸೂರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆದರು.   
ಸರ್ಕಾರೇತರ ಸಂಸ್ಥೆಗಳು, ಮನೋವಿಜ್ಞಾನಿಗಳು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮನೋಸ್ಥೈರ್ಯ ತುಂಬಬೇಕು ಎಂದು ಮಕ್ಕಳ ಕಲ್ಯಾಣ ಆಯುಕ್ತರು ಸೂಚಿಸಿದರು.
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನೀಡಬೇಕು. ನೋಡಲ್ ಅಧಿಕಾರಿಗಳಿಗೆ ಹಾಗೂ ಪರಿಹಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ, ಡಯಟ್ ಕೂಡಿಗೆಯ ಉಪನ್ಯಾಸಕರಾದ ಮಲ್ಲೇಸ್ವಾಮಿ ಇತರರು ಇದ್ದರು. 
ತೋರದಲ್ಲಿ ಮುಂದುವರಿದ ಶೋಧ 
ವೀರಾಜಪೇಟೆ : ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆದಮುಳ್ಳೂರು ಗ್ರಾಮದ ತೋರ ಗ್ರಾಮದಲ್ಲಿ ಶೋಧ ಕಾರ್ಯ ಮುಂದುವರೆದಿದ್ದರೂ ಇಂದು ಅಪರಾಹ್ನ ಬಿದ್ದ ಮಳೆಯಿಂದ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.
ತುರ್ತು ಪರಿಹಾರ ಕಾರ್ಯಕ್ಕಾಗಿ ಬಂದಿರುವ ಎನ್.ಡಿ.ಆರ್.ಎಫ್. ತಂಡ, ಭೂ ಸೇನೆ, ಜಿಲ್ಲಾ ಸಶಸ್ತ್ರ ಪಡೆಗಳು ಶೋಧ ಕಾರ್ಯ ಮುಂದು ವರೆಸಿದ್ದು, ನಾಲ್ಕು ಜೆಸಿಬಿ ಯಂತ್ರಗಳು ಶೋಧ ಕಾರ್ಯ ನಡೆಸುತ್ತಿವೆ. ಜೆ.ಸಿ.ಬಿ.ಯಂತ್ರಗಳು ಶೋಧಕ್ಕಾಗಿ ಮಣ್ಣನ್ನು ಅಗೆದ ಕಡೆಗಳಲ್ಲಿ ಜಲದಂತೆ ನೀರು ಬರುತ್ತಿದೆ. ಮೃತದೇಹಗಳು ಹುದುಗಿರುವ ಸ್ಥಳವನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆಯಾದರೂ ಶೋಧ ಕಾರ್ಯ ಮುಂದುವರೆದಿದೆ.
27 ಸಂತ್ರಸ್ತರ ಪುನರ್ವಸತಿ ಕೇಂದ್ರಗಳು : ವೀರಾಜಪೇಟೆ ಈ ತನಕ ಒಟ್ಟು 27 ಸಂತ್ರಸ್ತ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಜೊತೆಗೆ ಎರಡು ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಈ 27 ಕೇಂದ್ರಗಳಲ್ಲಿ 1428 ಕುಟುಂಬಗಳ ಒಟ್ಟು 4551 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಈ ಪೈಕಿ 2021 ಗಂಡಸರು, 2031 ಹೆಂಗಸರು ಹಾಗೂ 499 ಮಕ್ಕಳು ಸೇರಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಪುರಂದರ ತಿಳಿಸಿದ್ದಾರೆ.
ಸೇತುವೆ ದುರಸ್ತಿ
ವೀರಾಜಪೇಟೆ : ವೀರಾಜಪೇಟೆ ಬಳಿಯ ಬೇತರಿ ಗ್ರಾಮದ ಕಾವೇರಿ ಹೊಳೆಯ ಸೇತುವೆ ಬಳಿಯಿರುವ ತಂಡಾಗುಂಡಿ ಸೇತುವೆಯ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ರಿಂದ ಇಂದು ಬೆಳಗಿನಿಂದಲೇ ಈ ಸೇತುವೆಯ ಮೇಲೆ ಭಾರೀ ವಾಹನ ಗಳ ಸಂಚಾರವನ್ನು ನಿಷೇಧಿಸಲಾಗಿದ್ದು ಎಲ್ಲ ಬಸ್ಸುಗಳು, ಸರಕು ಸಾಗಾಣಿಕೆ ಲಾರಿಗಳು ಮಡಿಕೇರಿ ವೀರಾಜಪೇಟೆ ರಸ್ತೆ ಸಂಪರ್ಕಕ್ಕೆ ಬಳಸು ದಾರಿಯನ್ನು ಅವಲಂಭಿಸುತ್ತಿದೆ.
ನಾಲ್ಕು ದಿನಗಳ ಹಿಂದೆ ಈ ತಂಡಾಗುಂಡಿ ಸೇತುವೆಯ ಮೇಲೆ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿದ್ದುದರಿಂದ ಸೇತುವೆ ದುರಸ್ತಿಗೊಂಡು ಈ ಸೇತುವೆಯಲ್ಲಿ ಸಂಚರಿಸಲು ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.
ವೀರಾಜಪೇಟೆ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ತಂಡಾಗುಂಡಿ ಸೇತುವೆಯನ್ನು ಕಳೆದ ಒಂದು ವರ್ಷದ ಹಿಂದೆ ದುರಸ್ತಿಪಡಿಸಲಾಗಿತ್ತು.
ಭೂ ವಿಜ್ಞಾನಗಳ ಭೇಟಿ :  ಜಲಪ್ರಳಯಕ್ಕೆ ತುತ್ತಾದ ನಗರದ ಅಂಚಿನಲ್ಲಿರುವ ಬೆಟ್ಟದ ಪ್ರದೇಶಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.
ವೀರಾಜಪೇಟೆ ನಗರವು ಸೇರಿದಂತೆ ಬೆಟ್ಟ ಪ್ರದೇಶಗಳಲ್ಲಿ ಜಲಪ್ರಳಯಕ್ಕೆ ತುತ್ತಾಗಿ ಹಲವು ಮನೆಗಳು ಹಾನಿಗೊಳಗಾಗಿದ್ದು, ಬೆಟ್ಟದ ಪ್ರದೇಶಗಳಲ್ಲಿ ವಾಸ ಮಾಡುವ ಮನೆಗಳು ಹಾಗೂ ಹಾನಿಯಾದ ಮನೆಗಳನ್ನು ಪರಿಶೀಲನೆ ಮಾಡಿದರು. ಅರಸುನಗರ ಮತ್ತು ಅಯ್ಯಪ್ಪ ಬೆಟ್ಟದಲ್ಲಿ ಪರಿಶೀಲನೆ ಕೈಗೊಂಡರು ಅರಸುನಗರದಲ್ಲಿ ಕಳೆದ ವಾರದಲ್ಲಿ ಬಿದ್ದ ಬಾರಿ  ಮಳೆಯ ಪರಿಣಾಮ ಬೃಹತ್ ಬಂಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು ಬಂಡೆಯ ಅಂಚಿನಿಂದ ನೀರ ಕೊಡಿ ಹರಿಯುತಿದ್ದು, ಭಯದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಅಯ್ಯಪ್ಪ ಬೆಟ್ಟದ ಒಂದು ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ರೋಜಾ; ಭೂ ವಿಜ್ಞಾನಿಗಳಾದ ಲಾಯಲ್ ಮತ್ತು ರಾಹುಲ್ ಹಾನಿಯಾದ ಭೂ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇಲಾಖೆಯ ಪರಿಶೀಲನೆ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಸದಸ್ಯ ರಾಜೇಶ್ ಮತ್ತು ಸಿಬ್ಬಂದಿ, ಸ್ಥಳಿಯರು ಹಾಜರಿದ್ದರು.
 

Home    About us    Contact