ಪ್ರವಾಹ-ಸಂತ್ರಸ್ತರಿಗೆ-ಯಾವದೇ-ಆತಂಕ-ಬೇಡ-

ಮಡಿಕೇರಿ, ಆ.13: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ವಹಿಸಲ್ಪಡುತ್ತಿರುವ 41 ಪರಿಹಾರ ಕೇಂದ್ರಗಳಲ್ಲಿನ 2 ಸಾವಿರ ಕುಟುಂಬಗಳ ಸುಮಾರು 7 ಸಾವಿರ ಮಂದಿಗೆ ಯಾವದೇ ಸಮಸ್ಯೆಯಾಗದಂತೆ ಎಲ್ಲಾ ರೀತಿಯಲ್ಲಿಯೂ ನೆರವು ನೀಡಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪರಿಹಾರ ಕೇಂದ್ರಗಳಲ್ಲಿನ ನಿರಾಶ್ರಿತರಿಗೆ ಅಗತ್ಯವಿರುವ ಹೊದಿಕೆ, ಬಟ್ಟೆ ಸೇರಿದಂತೆ ಮೂಲಸೌಕರ್ಯಗಳನ್ನು ಈಗಾಗಲೇ ಜಿಲ್ಲಾಡಳಿತದಿಂದ ನೀಡಲಾಗಿದೆ. ಪ್ರತಿ ಪರಿಹಾರ ಕೇಂದ್ರಗಳಲ್ಲಿಯೂ ನೋಡಲ್ ಅಧಿಕಾರಿ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಸ್ತುತ ಬಹುತೇಕ ಕೇಂದ್ರಗಳು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾ.16 ರಂದು ಶಾಲೆಗಳು ಪುನರಾರಂಭವಾಗಲಿದೆ. ಆ ಸಂದರ್ಭ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರÀ ಸಂಖ್ಯೆಯನ್ನು ಗಮನಿಸಿ ಆನಂತರ ಅಂತಹ ಶಾಲೆಗಳಲ್ಲಿ ತರಗತಿಗಳನ್ನು ಯಾವ ರೀತಿ ನಡೆಸಬೇಕೆಂದು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು. ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ಥರಿಗೆ ಸೂಕ್ತ ವ್ಯವಸ್ಥೆಯಾಗುವವರೆಗೂ ಕೇಂದ್ರಗಳಲ್ಲಿ ಅವರನ್ನು ಎಲ್ಲಾ ಸೌಲಭ್ಯಗಳೊಂದಿಗೆ ನೋಡಿಕೊಳ್ಳಲಾಗುತ್ತದೆ. ಯಾವದೇ ರೀತಿಯ ಆತಂಕ ಸಂತ್ರಸ್ತರಲ್ಲಿ ಬೇಡ ಎಂದೂ ಜಿಲ್ಲಾಧಿಕಾರಿ ಮನವಿ ಮಾಡಿದರು.
ಹೊರ ಜಿಲ್ಲೆಗಳಿಂದ ಪರಿಹಾರ ಸಾಮಗ್ರಿಗಳಿಗೆ ಮಾತ್ರ ಜಿಲ್ಲಾಡಳಿತ ನಕಾರ ಸೂಚಿಸಿದ್ದು, ಕೊಡಗು ಜಿಲ್ಲೆಯಲ್ಲಿನ ದಾನಿಗಳು ಪರಿಹಾರ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಸಹಾಯ ನೀಡಲು ಮುಂದೆ ಬರಬಹುದು. ಆದರೆ ನೇರವಾಗಿ ಕೇಂದ್ರಗಳಿಗೆ ತೆರಳಿ ಪರಿಹಾರ ನೀಡುವ ಬದಲಿಗೆ ಆಯಾ ತಾಲೂಕು ಕೇಂದ್ರದ ತಾಲೂಕು ಕಛೇರಿಯ ಗೋದಾಮಿಗೆ ಪರಿಹಾರ ಸಾಮಗ್ರಿಗಳನ್ನು ನೀಡಬೇಕಾಗುತ್ತದೆ. ಇಂತಹ ಸಾಮಗ್ರಿಗಳನ್ನು ನಿರಾಶ್ರಿತರಿಗೆ ಸರ್ಕಾರದ ವತಿಯಿಂದಲೇ ನೀಡುವ ಸಂದರ್ಭ ದಾನಿಗಳು ಕೂಡ ಹಾಜರಿರಲು ಅವಕಾಶ ನೀಡಲಾಗಿದೆ ಎಂದೂ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಹೀಗಾಗಿ ಜಿಲ್ಲೆಯೊಳಗಿನ ದಾನಿಗಳು, ಸಂಘಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ತಾಲೂಕು ಕಛೇರಿ ಮೂಲಕ ನೀಡುವಂತೆಯೂ ಜಿಲ್ಲಾಧಿಕಾರಿ ಮನವಿ ಮಾಡಿದರು. ಯಾವದೇ ಪರಿಹಾರ ಕೇಂದ್ರಗಳಲ್ಲಿ ಸಮಸ್ಯೆಯಿದ್ದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ಕೊಠಡಿಗೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಡಳಿತದ ಬಳಿ ಮುಂಜಾಗ್ರತೆಯಾಗಿ ಸಾಕಷ್ಟು ಪಡಿತರ, ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಅಂತೆಯೇ ಮೈಸೂರು, ಉಡುಪಿ ಜಿಲ್ಲಾಧಿಕಾರಿಗಳೂ ಸಾಕಷ್ಟು ಸಾಮಗ್ರಿಗಳನ್ನು ಕೊಡಗಿಗೆ ಕಳುಹಿಸಿದ್ದರು. ಇವುಗಳನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ವಿತರಿಸುವ ಕಾರ್ಯ ನಡೆದಿದೆ ಎಂದೂ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ, ಕಾಫಿ ಮಂಡಳಿಯ ಅಧಿಕಾರಿ, ಸಿಬ್ಬಂದಿಗಳು ಈಗಾಗಲೇ  ಕೃಷಿ ಫಸಲು ನಷ್ಟದ ಬಗ್ಗೆ ಜಂಟಿ ಸರ್ವೆ ಕೈಗೊಂಡಿದ್ದು ಶೀಘ್ರದಲ್ಲಿಯೇ ಪ್ರವಾಹ, ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿರಬಹುದಾದ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ರವಾನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಬದ್ಧವಾಗಿದೆ. 
ಪ್ರವಾಹದ ನೀರು ನುಗ್ಗಿದ ಗ್ರಾಮವ್ಯಾಪ್ತಿಯಲ್ಲಿ ಅನಾರೋಗ್ಯದ  ಸಾಧ್ಯತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ತ ರೀತಿಯಲ್ಲಿ ಆರೋಗ್ಯ ಇಲಾಖೆಯಿಂದಲೂ ಜನಜಾಗೃತಿ ಮಾಹಿತಿ ನೀಡಲಾಗುತ್ತಿದೆ ಎಂದೂ ತಿಳಿಸಿದರು. 

Home    About us    Contact