ತಡೆಗೋಡೆ-ಕಾಮಗಾರಿ-ತನಿಖೆಗೆ-ಆದೇಶ

ಮಡಿಕೇರಿ, ಸೆ. 11: ಇಲ್ಲಿನ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ ಮಳೆಗಾಲದಲ್ಲಿ ಭೂ ಕುಸಿತದಿಂದ ಹಾನಿಗೊಂಡಿರುವ ಜಾಗದಲ್ಲಿ ತಡೆಗೋಡೆಯೊಂದಿಗೆ ಪ್ರವಾಸಿ ತಾಣ ರೂಪಿಸುವ ಸಂಬಂಧ ನಗರಸಭೆಯಿಂದ ರೂ. 1.7 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪ್ರವಾಸೋದ್ಯಮ ಹಾಗೂ ಕನ್ನಡ - ಸಂಸ್ಕøತಿ ಸಚಿವ ಸಿ.ಟಿ. ರವಿ ಆದೇಶಿಸಿದ್ದಾರೆ. ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಕೊಡಗು ಪ್ರವಾಸೋದ್ಯಮ ಸಲಹಾ ಸಮಿತಿ ಸದಸ್ಯರಾಗಿರುವ ‘ಶಕ್ತಿ’ ಸಂಪಾದಕ ಜಿ. ಚಿದ್ವಲಾಸ್ ಅವರು ಈ ಬಗ್ಗೆ ಸಚಿವ ಸಿ.ಟಿ. ರವಿ ಅವರ ಗಮನ ಸೆಳೆದರು. ಕಳೆದ ವರ್ಷದ ಮಳೆಯಲ್ಲಿ ಸುಮಾರು 90 ಅಡಿ ಎತ್ತರದಿಂದ ಬರೆ ಕುಸಿದು ಅನಾಹುತ ಸಂಭವಿಸಿದ ಸ್ಥಳದಲ್ಲಿ ಕೇವಲ ರೂ. 1.25  ಕೋಟಿ ವೆಚ್ಚದಲ್ಲಿ ಬೆಂಗಳೂರು ಬಿ.ಎಂ.ಎಸ್. ತಾಂತ್ರಿಕ ಕಾಲೇಜಿನ ತಂತ್ರಜ್ಞರು ಯೋಜನೆ ಸಿದ್ಧಗೊಳಿಸಿ, ಆಧುನಿಕ ರೀತಿಯ ತಡೆಗೋಡೆಯೊಂದಿಗೆ ಪ್ರವಾಸಿ ತಾಣ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿದ್ದಾಗಿ ನೆನಪಿಸಿದರು.

ಅಲ್ಲದೆ ಈ ಸ್ಥಳವನ್ನು ಪ್ರವಾಸೀ ಆಕರ್ಷಣೀಯ ತಾಣವಾಗಿ ಕಾಮಗಾರಿ ನಿರ್ವಹಿಸಲು ಕ್ರಿಯಾ ಯೋಜನೆ ಸಿದ್ಧಗೊಳಿಸಿ ನಗರಸಭೆಗೆ ಸಲ್ಲಿಸಿದ್ದರೂ, ಅದನ್ನು ತಿರಸ್ಕರಿಸಿ ಅನಾವಶ್ಯಕ ರೂ. 1.7 ಕೋಟಿ ಹಣದಲ್ಲಿ ತಡೆಗೋಡೆಯನ್ನು ನಿರ್ಮಿಸದೆ ಕೇವಲ ನೆಲಹಂತದ ಕೆಲಸ ಕೈಗೊಂಡಿದ್ದಾಗಿದೆ ಎಂದು ದೂರಿದರು.
ಪರಿಣಾಮ ಈಗಿನ ಮಳೆಗಾಲದಲ್ಲಿ ಮತ್ತೆ ಮಣ್ಣು 
(ಮೊದಲ ಪುಟದಿಂದ) ಕುಸಿದಿದ್ದು, ನಗರಸಭೆ ಅದನ್ನು ತೆರವುಗೊಳಿಸಲು ಮುಂದಾಗಿಲ್ಲವೆಂದು ಚಿದ್ವಿಲಾಸ್ ಬೊಟ್ಟು ಮಾಡಿದರು. ಈ ಬಗ್ಗೆ ಧ್ವನಿಗೂಡಿಸಿದ ಶಾಸಕ ಅಪ್ಪಚ್ಚು ರಂಜನ್ ಆಯುಕ್ತ ಎಂ.ಎಲ್. ರಮೇಶ್ ಅವರಿಂದ ವಿವರಣೆ ಬಯಸಿದರು. ಆಯಕ್ತರು ಪ್ರತಿಕ್ರಿಯಿಸಿ ರೂ. 1.7 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದು, ಇನ್ನುಳಿದಂತೆ ಹಿಂದಿನ ಪ್ರವಾಸೋದ್ಯಮ ಸಚಿವರ ಭರವಸೆ ಮೇರೆಗೆ ರೂ. 2 ಕೋಟಿ ಹೆಚ್ಚುವವರಿ ಅನುದಾನದಿಂದ ಮುಂದಿನ ಕೆಲಸ ಕೈಗೊಳ್ಳಬೇಕಿದೆ ಎಂದರು.
ಮತ್ತೆ ವಿಷಯ ಪ್ರಸ್ತಾಪಿಸಿದ ಚಿದ್ವಿಲಾಸ್ ಅವರು ಯಾವ ತಡೆಗೋಡೆಯೂ ನಿರ್ಮಿಸಿಲ್ಲ ಎಂದು ನೆನಪಿಸಿದಾಗ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವಂತೆ ಸಚಿವರು ತಾಕೀತು ಮಾಡಿದರು. ಅಲ್ಲದೆ ಗುತ್ತಿಗೆದಾರನಿಗೆ ಹಣ ಪಾವತಿಸಿರುವ ಬಗ್ಗೆ ಆಯುಕ್ತರಲ್ಲಿ ಪ್ರಶ್ನಿಸಿದಾಗ, ಶೇ. 50 ಹಣವನ್ನು ಕಿಶೋ ಬಾಬು ಎಂಬವರಿಗೆ ನೀಡಿರುವದಾಗಿ ಪ್ರತಿಕ್ರಿಯಿಸಿದರು.
ಅಂಥ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿ ಮೊತ್ತ ಹಿಂಪಡೆಯುವಂತೆ ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದರು. 

Home    About us    Contact