-ಕುತ್ತಿಗೆಗೆ-ಕಡಿದು-ಹತ್ಯೆ-ಮಾಡಿರುವ-ಶಂಕೆ
ಸೋಮವಾರಪೇಟೆ, ಅ.9: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಮಾದಾಪುರ ಸಮೀಪದ ಜಂಬೂರಿನಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಕೆಲಸಕ್ಕೆ ಆಗಮಿಸಿದ್ದ ಬಿಹಾರ ಮೂಲದ ಯುವಕನೋರ್ವ ಕಾಫಿ ತೋಟದ ಮಧ್ಯೆ ಶವವಾಗಿ ಪತ್ತೆಯಾಗಿರುವ ಘಟನೆ ತಾ.8ರಂದು ಬೆಳಕಿಗೆ ಬಂದಿದೆ.
ಬಿಹಾರ ಮೂಲದ ದೀಪಕ್‍ಕುಮಾರ್ (24) ಎಂಬಾತನೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದವನಾಗಿದ್ದು, ಕಳೆದ ತಾ.5 ರಂದು ಸಂಜೆ 7 ಗಂಟೆಗೆ ಜಂಬೂರಿನಿಂದ ಮಾದಾಪುರಕ್ಕೆ ಆಗಮಿಸಿ, ಅಲ್ಲಿಂದ ವಾಪಸ್ ಜಂಬೂರಿಗೆ ತೆರಳುವ ಮಾರ್ಗಮಧ್ಯೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಾದಾಪುರದ ಜಯಕುಮಾರ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಶವ ಕಂಡುಬಂದಿದ್ದು, ತಾ. 8ರಂದು ಬೆಳಗ್ಗೆ ಕಾರ್ಮಿಕ ಸ್ವಾಮಿ ಎಂಬವರು ಕೆಲಸಕ್ಕೆಂದು ತೆರಳಿದ ಸಂದರ್ಭ  ಘಟನೆ ಬೆಳಕಿಗೆ ಬಂದಿದೆ.
ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಟೈಲ್ಸ್ ಕೆಲಸಕ್ಕೆಂದು ಕಳೆದ 2 ತಿಂಗಳ ಹಿಂದೆ ಆಗಮಿಸಿದ್ದ ದೀಪಕ್‍ಕುಮಾರ್‍ನ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದ್ದು, ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಕಡಿದಿರುವ ಗುರುತುಗಳು ಕಂಡುಬಂದಿವೆ.
ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದು, ದೇಹದ ಅಂಗಗಳನ್ನು ಎಫ್‍ಎಸ್‍ಎಲ್ ವರದಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಡಿವೈಎಸ್‍ಪಿ ಮುರುಳೀಧರ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯುವಕನ ಬಗ್ಗೆ ಆತನ ಸಂಬಂಧಿಕರಿಂದ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತಾ. 5ರಂದು ದೀಪಕ್‍ಕುಮಾರ್‍ನ ಜತೆಗಿದ್ದವರಿಂದಲೇ ಕೃತ್ಯ ನಡೆದಿರಬಹುದೇ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Home    About us    Contact