ಪೇರೂರಿನಲ್ಲಿ-ಸದ್ದು-ಮಾಡುತ್ತಿರುವ-ನಿಗೂಢ-ಶಬ್ಧ..!

 ಮಡಿಕೇರಿ, ನ. 7: ಪೇರೂರಿನ ಇಗ್ಗುತಪ್ಪ ಬೆಟ್ಟದಲ್ಲಿ  ಕೇಳಿ ಬರುತ್ತಿದೆ ಎನ್ನಲಾದ ನಿಗೂಢ ಶಬ್ಧ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು; ಈ ಶಬ್ಧದ ನಿಜವಾದ ಒಳಮರ್ಮ ಏನು ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.ಪೇರೂರಿನ ಇಗ್ಗುತಪ್ಪ ಬೆಟ್ಟದಲ್ಲಿ ತಾ. 4 ರಂದು ರಾತ್ರಿ 9 ಗಂಟೆಯಿಂದ 10.30ರವರೆಗೆ ಭೂಮಿಯ ಒಳಭಾಗದಲ್ಲಿ ನೀರು ಹರಿಯು ವಂತಹ ಶಬ್ಧವೊಂದು ಕೇಳಿ ಬಂತು ಎನ್ನ ಲಾಗಿದ್ದು; ಈ ಭಾಗದ ನಿವಾಸಿಗಳಾದ ನಂದಕುಮಾರ್, ಯದುಕುಮಾರ್, ಶಂಭುತಮ್ಮಯ್ಯ ಹಾಗೂ ನವೀನ ಎಂಬವರುಗಳು ಈ ಶಬ್ಧವನ್ನು ಸ್ಪಷ್ಟವಾಗಿ ಆಲಿಸಿದವರಾಗಿ ದ್ದಾರೆ. ಶಬ್ಧ ಕೇಳಿದ್ದರಿಂದ ಗಾಬರಿ ಗೊಂಡ ನಂದಕುಮಾರ್, ಜಿಲ್ಲಾಡಳಿ ತದ ಸಹಾಯವಾಣಿ 1077 ಸಂಖ್ಯೆಗೆ ಕರೆ ಮಾಡಿದ್ದಾರೆ. (ಮೊದಲ ಪುಟದಿಂದ)  ಆದರೆ ಕರೆ ಕನೆಕ್ಟ್ ಆಗದ ಕಾರಣ ಅವರ ಸ್ನೇಹಿತ ಯುಕೋ ಸಂಚಾಲಕ ಮಂಜುಚಿಣ್ಣಪ್ಪ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು; ಪೊಲೀಸರು ನಂದಕುಮಾರ್ ಅವರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ನಂದಕುಮಾರ್ ಹಾಗೂ ಇತರ ಕೆಲವರು ಬೆಟ್ಟದ ಬಳಿ ತೆರಳಿ ಪರಿಶೀಲಿಸಿದ್ದು; ಯಾವದೇ ಕುರುಹು ಸಿಗದೆ ಹಿಂತಿರುಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಇಗ್ಗುತಪ್ಪ ಬೆಟ್ಟದಲ್ಲಿ ವಿಚಿತ್ರ ಶಬ್ಧ ಕೇಳಿ ಬರುತ್ತಿದೆ; ಬೆಟ್ಟವೇ ಉರುಳುವ ಸಾಧ್ಯತೆ ಇದೆ ಎಂಬ ರೀತಿಯಲ್ಲಿ ಸಂದೇಶಗಳು ಹರಿದಾಡಲಾರಂಭಿಸಿದೆ.ಆದರೆ, ಈ ವಿಚಿತ್ರ ಶಬ್ಧ ನಂದಕುಮಾರ್, ಯದುಕುಮಾರ್, ಶಂಭು ತಮ್ಮಯ್ಯ, ನವೀನ ಇವರುಗಳನ್ನು ಹೊರತು ಪಡಿಸಿ ಆ ಭಾಗದ ಬಹುತೇಕ ಮಂದಿಗೆ ಕೇಳಿಸಿಲ್ಲ ಎಂಬದು ‘ಶಕ್ತಿ’ ಸ್ಥಳಕ್ಕೆ ಭೇಟಿ ನೀಡಿದಾಗ ಗಮನಕ್ಕೆ ಬಂತು. ‘ಶಕ್ತಿ’ಯೊಂದಿಗೆ ಮಾತನಾಡಿದ ಈ ವ್ಯಾಪ್ತಿಯ ಸ್ಥಳೀಯರಾದ ಹರೀಶ್ ಬಿದ್ದಯ್ಯ, ರಾಣಿ ತಮ್ಮಯ್ಯ, ಆನೇಡ ಅಪ್ಪಣ್ಣ,  ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಇಗ್ಗುತಪ್ಪ ಸನ್ನಿಧಿಯ ನಾಡತಕ್ಕರಾದ ಪ್ರಭು ಪೊನ್ನಮ್ಮಯ್ಯ, ದಯಾ ಕುಟ್ಟಪ್ಪ, ತೆಕ್ಕಡೆ ಸುಬ್ಬಯ್ಯ ಇವರುಗಳು ಇಗ್ಗುತಪ್ಪ ಬೆಟ್ಟದಲ್ಲಿ ವಿಚಿತ್ರ ಶಬ್ಧ ಕೇಳಿ ಬರುತ್ತಿದೆ ಎಂಬದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಆ ಭಾಗದಲ್ಲಿ ಹಲವಷ್ಟು ನೈಸರ್ಗಿಕ ನೀರಿನ ಕೊಲ್ಲಿಗಳಿದ್ದು, ಅಲ್ಲಿ ಹರಿಯುವ ನೀರಿನ ಶಬ್ಧವನ್ನು ಅಥವಾ ಜೋರಾಗಿ ಬೀಸುವ ಗಾಳಿಯ ಸದ್ದನ್ನು ವಿಚಿತ್ರ ಶಬ್ಧ ಎಂಬದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳುತ್ತಾರೆ.

ಯಾವದು ಸತ್ಯ?
ಪೇರೂರು ಇಗ್ಗುತಪ್ಪ ಬೆಟ್ಟದ ಸಮೀಪದಲ್ಲಿರುವ ಮನೆಗಳ ನಿವಾಸಿಗಳಿಗೆ ಯಾವದೇ ನಿಗೂಢ ಶಬ್ಧದ ಅನುಭವಾಗಿಲ್ಲ. ಆದರೆ ಅದರಿಂದ ದೂರದಲ್ಲಿರುವ ಕೆಲಮಂದಿಗೆ ಮಾತ್ರ ಶಬ್ಧದ ಅನುಭವಾಗಿದೆ. ಈ ನಡುವೆ ಶಬ್ಧ ಬರುತ್ತಿದೆ ಎನ್ನಲಾದ ಪೇರೂರು ಗ್ರಾಮದ ಬೆಟ್ಟದ ಬಳಿಯ ನಿವಾಸಿಗಳನ್ನು ತಾನು ಸಂಪರ್ಕಿಸಿದ್ದು; ಅಪಟ್ಟಿರ ನಂದಾ ಎಂಬವರನ್ನು ಹೊರತುಪಡಿಸಿ ಉಳಿದವರ್ಯಾರು ಕೂಡ ಶಬ್ಧದ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ ಎಂದು ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ. ಪೇರೂರು ಬೆಟ್ಟದಲ್ಲಿ ತಾನು ಭೇಟಿ ನೀಡಿ ಪರಿಶೀಲಿಸಿದ್ದು; ಕೆಲವರು ಮಾತ್ರ ಶಬ್ಧ ಕೇಳಿರುವ ಬಗ್ಗೆ ತಿಳಿಸಿದ್ದು; ಹೆಚ್ಚಿನವರಿಗೆ ಶಬ್ಧ ಕೇಳಿರುವ ಬಗ್ಗೆ ಯಾವದೇ ಮಾಹಿತಿ ಎಲ್ಲವಾಗಿದೆ ಎಂದು ನಾಪೋಕ್ಲು ಕಂದಾಯ ಪರಿವೀಕ್ಷಕ ಪಿ.ಡಿ. ರಾಮಯ್ಯ ಹೇಳಿದ್ದಾರೆ. ಇವೆಲ್ಲಾ ಹೇಳಿಕೆಗಳ ಮಧ್ಯೆ ಪೇರೂರು ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿರುವ ಹಿರಿಯ ಭೂವಿಜ್ಞಾನಿ ರೇಷ್ಮ ಅವರು; ಅಲ್ಲಿ ಶಬ್ಧವೊಂದು ಸಣ್ಣಪ್ರಮಾಣದಲ್ಲಿ ಕೇಳಿ ಬರುತ್ತದೆಯಾದರೂ ನಿರ್ದಿಷ್ಟವಾಗಿ ಅದು ಯಾವದರ ಶಬ್ಧ ಎಂದು ಖಚಿತಗೊಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಹಾಗಾದರೆ.., ಅಲ್ಲಿ ನಿಜವಾಗಿಯೂ ನಿಗೂಢ ಶಬ್ಧ ಕೇಳಿಬರುತ್ತಿದೆಯೇ? ಒಂದು ವೇಳೆ ಕೇಳಿ ಬರುತ್ತಿದೆ ಎನ್ನುವದಾದರೆ ಬೆರಳಣಿಕೆಯ ಮಂದಿಯನ್ನು ಹೊರತು ಪಡಿಸಿ ಉಳಿದವರಿಗೇಕೆ ಆ ಶಬ್ಧದ ಅನುಭವಾಗಿಲ್ಲ? ಭೂವಿಜ್ಞಾನಿ ರೇಷ್ಮ ಅವರು ಹೇಳುವಂತೆ ಸಣ್ಣ ಪ್ರಮಾಣದಲ್ಲಿ ಕೇಳಿಬರುತ್ತಿರುವ ಶಬ್ಧದ ಮೂಲ ಯಾವದು? ಈ ಬಗ್ಗೆ ಸೂಕ್ತ ಅಧ್ಯಯನದ ಅಗತ್ಯವಿದ್ದು; ಆ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕಿದೆ.
 

Home    About us    Contact