ಟಿಪ್ಪು-ಚರಿತ್ರೆ-ಪಠ್ಯದಿಂದ-ತೆಗೆಯುವ-ಪ್ರಸ್ತಾಪ;-ಬೆಂಗಳೂರಿನಲ್ಲಿ-ಸಮಿತಿ-ಸಭೆ

 ಸೋಮವಾರಪೇಟೆ, ನ.7: ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಪಠ್ಯಪುಸ್ತಕ ದಿಂದ ಕೈಬಿಡುವಂತೆ ಈ ಹಿಂದೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶಿಕ್ಷಣ ಇಲಾಖಾ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ರಾಜ್ಯ ಪಠ್ಯಪುಸ್ತಕ ಸಮಿತಿಯ ಸಭೆ ನಡೆಯಿತು. 

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಆಯೋಜಿ ಸಲ್ಪಟ್ಟಿದ್ದ ಸಮಿತಿಯ ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಸುಮಾರು 16 ಪುಟಗಳ ವರದಿಯನ್ನು ಸಮಿತಿಯ ಎದುರು ಸಲ್ಲಿಸಿದ್ದು, ಸದಸ್ಯರ ಕೆಲವೊಂದು ಪ್ರಶ್ನೆಗಳಿಗೆ ದಾಖಲೆಗಳ ಸಹಿತ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಎಸ್‍ಎಸ್‍ಎಲ್‍ಸಿ  ಬೋರ್ಡ್ ಕಚೇರಿಯಲ್ಲಿ ಆಯೋಜಿಸ ಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು, ಟಿಪ್ಪು ಸುಲ್ತಾನ್‍ನನ್ನು ಅನಗತ್ಯವಾಗಿ ವೈಭವೀಕರಿಸಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಲಾಗುತ್ತಿದೆ. ಅವರ ನಿಜವಾದ ಕರಾಳ ಮುಖವನ್ನು ತೋರಿಸಿಲ್ಲ. ಇದು ಇತಿಹಾಸಕ್ಕೆ ಮಾಡಿರುವ ಅನ್ಯಾಯ ಎಂದು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
6, 7 ಮತ್ತು 10ನೇ ತರಗತಿಯ ಪಠ್ಯದಲ್ಲಿ ಟಿಪ್ಪುವಿನ ಬಗ್ಗೆ ಇರುವ ಸುಳ್ಳು ಮಾಹಿತಿಯನ್ನು ತೆಗೆಯಬೇಕು. ಪಠ್ಯದಲ್ಲಿರುವಂತೆ ಟಿಪ್ಪುಸುಲ್ತಾನ್ ಒಳ್ಳೆಯವನಲ್ಲ, ಆತನ ಕ್ರೌರ್ಯಗಳಿಗೆ ಬೇಕಾದಷ್ಟು ಸಾಕ್ಷಿಗಳಿವೆ ಎಂದು ವಾದ ಮಂಡಿಸಿದ ರಂಜನ್, ಇದಕ್ಕೆ ಪೂರಕವಾಗಿ ಟಿಪ್ಪು ಬರೆದಿರುವ ಪತ್ರಗಳನ್ನು ಆಧಾರವಾಗಿಟ್ಟುಕೊಂಡು, ಇಂಗ್ಲೀಷ್ ಇತಿಹಾಸಕಾರ ಫೆಡ್ರಿಕ್ ಬರೆದಿರುವ ಪುಸ್ತಕವನ್ನು ಇಂಗ್ಲೆಂಡಿನಿಂದ ತರಿಸಿ ಸಮಿತಿ ಎದುರು ಹಾಜರುಪಡಿಸಿದ್ದಾರೆ.
ಪರ್ಷಿಯನ್ ಭಾಷೆಯಲ್ಲಿ ಟಿಪ್ಪು ಬರೆದಿರುವ ಪತ್ರಗಳನ್ನು ಇಂಗ್ಲೀಷ್‍ಗೆ ಫೆಡ್ರಿಕ್ ಎಂಬಾತ ಅನುವಾದ ಮಾಡಿದ್ದು, ಅದರ ಪ್ರಮುಖ ಅಂಶಗಳನ್ನು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ 
(ಮೊದಲ ಪುಟದಿಂದ)  ಅವರು ಕನ್ನಡಕ್ಕೆ ಅನುವಾದಿಸಿ, ಸಮಗ್ರ ಮಾಹಿತಿಯನ್ನು ಸಮಿತಿಯ ಎದುರು ಮಂಡಿಸಿದ್ದಾರೆ.
ಇದರೊಂದಿಗೆ ಟಿಪ್ಪುವಿನ ಆಡಳಿತದ ಸಂದರ್ಭ ನಡೆದ ಘೋರ ಅನ್ಯಾಯಗಳನ್ನು ದಾಖಲಿಸಿರುವ ಇತರ ಇತಿಹಾಸಕಾರರ ಪುಸ್ತಕಗಳನ್ನು ಸಹ ಸಮಿತಿಗೆ ಕೊಡಲಾಗಿದೆ. ಟಿಪ್ಪುವಿನಿಂದ ಕೊಡಗಿಗೆ ಬಹಳಷ್ಟು ದ್ರೋಹವಾಗಿದೆ, ಆತನ ಇತಿಹಾಸವನ್ನು ಪಾಠದಲ್ಲಿ ಸೇರಿಸುವ ಮೂಲಕ ಇಂದಿಗೂ ಕೊಡಗಿನ ಜನರಿಗೆ ಅವಮಾನ ಮಾಡಲಾಗುತ್ತಿದೆ. ಆತನ ನಿಜವಾದ ಮುಖವನ್ನು ತೋರಿಸಬೇಕೇ ಹೊರತು, ಸುಳ್ಳು ಚರಿತ್ರೆಯನ್ನು ಅಳವಡಿಸಿರುವದು ಸರಿಯಲ್ಲ ಎಂದು ಶಾಸಕರು ಸಮಿತಿಯ ಎದುರು ತಮ್ಮ ವಾದ ಮಂಡಿಸಿದರು. 
ಈ ಬಗ್ಗೆ ಸಮಿತಿಯ ಕೆಲ ಸದಸ್ಯರು ಅಪ್ಪಚ್ಚು ರಂಜನ್ ಅವರನ್ನು ಮರು ಪ್ರಶ್ನಿಸಿದ್ದು, ಇದಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿರುವದಾಗಿ ತಿಳಿದುಬಂದಿದೆ. ಅಂತಿಮವಾಗಿ ಸಮಿತಿಯು ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದು, ಸಮಗ್ರವಾಗಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ಸಮಿತಿಯ ಸಭೆಯಲ್ಲಿ ಪಠ್ಯಪುಸ್ತಕ ಸಮಿತಿ ನಿರ್ದೇಶಕ ಗೋಪಾಲಕೃಷ್ಣ, ಡಾ. ಅಶ್ವತ್‍ನಾರಾಯಣ್, ಚಂದ್ರಶೇಖರ್, ರಾಜೇಶ್, ರವಿಶಂಕರ್ ಅವರುಗಳು ಉಪಸ್ಥಿತರಿದ್ದರು. ಶಾಸಕರೊಂದಿಗೆ ಟಿಪ್ಪುಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅವರು ಸಭೆಯಲ್ಲಿದ್ದರು.
ರಾಜ್ಯ ಸಮಿತಿಯಿಂದ ಸಚಿವರ ಭೇಟಿ: ರಾಜ್ಯ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಇಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರನ್ನು ಭೇಟಿ ಮಾಡಿ, ಪಠ್ಯದಿಂದ ಟಿಪ್ಪುವಿನ ಚರಿತ್ರೆ ಕೈಬಿಡುವಂತೆ ಒತ್ತಾಯಿಸಿ, ಮನವಿ ಸಲ್ಲಿಸಲಾಗಿದೆ.
ಸಮಿತಿಯ ರಾಜ್ಯ ಸಂಚಾಲಕ ಅಡ್ಡಂಡ ಕಾರ್ಯಪ್ಪ, ಫಟಾಫಟ್ ಶ್ರೀನಿವಾಸ್, ಹಿಂದೂ ಜಾಗರಣಾ ವೇದಿಕೆಯ ಉಲ್ಲಾಸ್, ಚಿತ್ರದುರ್ಗದ ನಾಗೇಂದ್ರ ಅವರುಗಳು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. 
ಅಡ್ಡಂಡ ಕಾರ್ಯಪ್ಪ ಮಾತನಾಡಿ, ಅನೇಕ ಇತಿಹಾಸಕಾರರು, ಗೆಜೆಟಿಯರ್‍ಗಳಲ್ಲಿ ಟಿಪ್ಪುವಿನ ಕರಾಳ ಮುಖ ತೋರಿಸಲಾಗಿದ್ದರೂ ಸಹ ಪಠ್ಯದಿಂದ ಯಾಕೆ ಕೈಬಿಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಪಠ್ಯಪುಸ್ತಕ ಸಮಿತಿಯು ಟಿಪ್ಪುವಿನ ಒಂದೇ ಮುಖವನ್ನು ತೋರಿಸುವ ಮೂಲಕ ಒಳ್ಳೆಯ ವ್ಯಕ್ತಿಯೆಂದು ಬಿಂಬಿಸುತ್ತಿದೆ. ಆತ ನೂರಾರು ದೇವಾಲಯಗಳನ್ನು ಕೆಡವಿದ್ದು, ಮತಾಂತರ ಮಾಡಿದ್ದಾನೆ. ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿದ್ದರೂ ಸಹ ಮಕ್ಕಳಿಗೆ ಸುಳ್ಳು ಚರಿತ್ರೆ ಬೋಧಿಸಲಾಗುತ್ತಿದೆ. ಈಗಾಗಲೇ ಟಿಪ್ಪು ಜಯಂತಿಯನ್ನು ರದ್ದು ಗೊಳಿಸಿರುವದು ಸ್ವಾಗತಾರ್ಹ ವಾದರೂ, ಟಿಪ್ಪುವಿನ ಚರಿತ್ರೆಯನ್ನು ಪಠ್ಯದಿಂದ ತೆಗೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ ಲಾಗುವದು ಎಂದು ಎಚ್ಚರಿಸಿದ್ದಾರೆ.

Home    About us    Contact