ಶ್ರೀಕಂಠಯ್ಯ---ಶ್ರೀಧರಮೂರ್ತಿ-ಅಮಾನತು

ಮಡಿಕೇರಿ, ನ.7: ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧದ ತುರ್ತು ಕಾಮಗಾರಿಗೆ ಬಿಡುಗಡೆಗೊಳಿಸಲಾಗಿದ್ದ ರೂ. 28 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವಿಭಾಗದ ಪ್ರಭಾರ ಲೆಕ್ಕಾಧಿಕಾರಿ ಶ್ರೀಧರಮೂರ್ತಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಲ್. ಶ್ರೀಕಂಠಯ್ಯ ಅವರಿಬ್ಬರನ್ನು ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ ಕೊಡಗು ಜಿಲ್ಲಾ ಪಂಚಾಯಿತಿಗೆ ಕಳೆದ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದ ಹಾನಿಗೀಡಾದ ರಸ್ತೆಗಳ ದುರಸ್ತಿಗಾಗಿ ಬಿಡುಗಡೆಗೊಳಿಸಲಾಗಿದ್ದ ರೂ. 21 ಕೋಟಿಯನ್ನು ಕೋಟಕ್ ಮಹೇಂದ್ರ ಬ್ಯಾಂಕ್‍ನಲ್ಲಿ ಇರಿಸಿದ್ದ ಹಿಂದಿನ ಪ್ರಭಾರ ಕಾರ್ಯಪಾಲಕ ಅಭಿಯಂತರ ಎಲ್.ಶ್ರೀಕಂಠಯ್ಯ ವಿರುದ್ಧ ಅಮಾತಿನ ತೂಗುಕತ್ತಿ ಗೋಚರಿಸಿತ್ತು. ಇಂದು ನಡೆದ ಕೊಡಗು ಜಿ.ಪಂ. ಸಭೆಯಲ್ಲಿ ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ ಕೇಳಿಬಂದ ಬೆನ್ನಲ್ಲೇ, ಗುರುತರ ಆರೋಪಗಳನ್ನು ಎದುರಿಸುತ್ತಿರುವ ಎಲ್.ಶ್ರೀಕಂಠಯ್ಯ ಅವರನ್ನು ರಾಜ್ಯ ಸರಕಾರ ಅಮಾನತುಗೊಳಿಸಿದ್ದು, ಇದೇ ಆದೇಶದೊಂದಿಗೆ ಮುಂದುವರಿದ ಸೂಚನೆಯಂತೆ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಲೆಕ್ಕಪತ್ರ ಹೊಣೆಗಾರಿಕೆ ನಿರ್ವಹಿಸುತ್ತಿರುವ ಶ್ರೀಧರಮೂರ್ತಿ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ  ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರುಗಳ ನಿರ್ದೇಶನದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವದಾಗಿ  ‘ಶಕ್ತಿ’ಗೆ ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.


Home    About us    Contact