ಜಿ.ಪಂ.-ಇಂಜಿನಿಯರ್-ವಿರುದ್ಧ-ಸೂಕ್ತ-ಕ್ರಮಕ್ಕೆ-ಪ್ರಸ್ತಾವನೆ

ಮಡಿಕೇರಿ, ನ. 7: ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾನಿ ಸಂಬಂಧದ ತುರ್ತು ಕಾಮಗಾರಿಗಾಗಿ; ಸರಕಾರದ ಅನುದಾನ ಮೊತ್ತ ರೂ. 28ಕೋಟಿಯನ್ನು; ಸಂಬಂಧಿಸಿದ ಆರ್ಥಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಖಾಸಗಿ ಕೋಟಕ್ ಮಹೇಂದ್ರ ಬ್ಯಾಂಕ್ ಶಾಖೆಯಲ್ಲಿ ಇರಿಸಿದ್ದ ಜಿ.ಪಂ. ಸಹಾಯಕ ಇಂಜಿನಿಯರ್ ಶ್ರೀಕಂಠಯ್ಯ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತಿಯಲ್ಲಿ ನಡೆದ ತನಿಖಾ ಸಮಿತಿ ಸಭೆಯು ಈ ನಿರ್ಧಾರ ಪ್ರಕಟಿಸಿದೆ.ಇಂದಿನ ಸಭೆಯ ನಡಾವಳಿ ಪ್ರಕಾರ; ಕಳೆದ ಜುಲೈ 27 ರಂದು ನಡೆದಿದ್ದ ಜಿ.ಪಂ. ಸಾಮಾನ್ಯ ಸಭೆಯಲ್ಲಿ; ಕೊಡಗಿನಲ್ಲಿ ಸಂಭವಿಸಿದ 2018ರ ಪ್ರಾಕೃತಿಕ ವಿಕೋಪ ಸಂಬಂಧ ಬಿಡುಗಡೆಗೊಂಡಿದ್ದ ರೂ. 28 ಕೋಟಿ ಹಣವನ್ನು; ಅಂದಿನ ಪಂಚಾಯತ್‍ರಾಜ್ ಮಡಿಕೇರಿ ವಿಭಾಗದ ಪ್ರಬಾರ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ; ಖಾಸಗಿ ಕೋಟಕ್ ಮಹೇಂದ್ರ ಬ್ಯಾಂಕ್ ಶಾಖೆಯಲ್ಲಿ ಇರಿಸಿರುವದು ಕಂಡು ಬಂದಿದೆ.ಖಾಸಗಿ ಬ್ಯಾಂಕ್‍ನಲ್ಲಿ ಈ ಹಣದ ಮೊತ್ತವನ್ನು ಇರಿಸುವಾಗ ಜಿಲ್ಲಾಧಿಕಾರಿಗಳು; ಜಿ.ಪಂ. ಆರ್ಥಿಕ ವಿಭಾಗ ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಪ್ಪಿಗೆ ಇಲ್ಲದೆ ತಮ್ಮ ಸ್ವ ಇಚ್ಚೆಯಿಂದ ತೀರ್ಮಾನ ಕೈಗೊಂಡಿರುವದು ತನಿಖೆಯಿಂದ ಗೋಚರಿಸಿದೆ.

ಆ ಕಾರಣದಿಂದ ಹಿಂದಿನ ಸಭೆಯಲ್ಲಿ ಇದೊಂದು ಅವ್ಯವಹಾರ ಪ್ರಕರಣವೆಂದು ಪರಿಗಣಿಸಿ; ತನಿಖಾ ಸಮಿತಿ ರಚಿಸುವದರೊಂದಿಗೆ ಮಾಹಿತಿ ಸಂಗ್ರಹಿಸಿದ ಮೇರೆಗೆ; ಇಂಜಿನಿಯರ್ ಶ್ರೀಕಂಠಯ್ಯ ಅವರು ಹಲವಷ್ಟು ಲೋಪಗಳನ್ನು ಎಸಗಿರುವದು ಪತ್ತೆಯಾಗಿದೆ. ಅಲ್ಲದೆ ಕೆ.ಟಿ. ಸತೀಶ್ ಎಂಬ ತೃತೀಯ ದರ್ಜೆ ಗುತ್ತಿಗೆದಾರರನ್ನು ಒಂದನೇ ದರ್ಜೆ ಗುತ್ತಿಗೆದಾರರೆಂದು ತಪ್ಪು ವರದಿ ಮೂಲಕ ಕಾಮಗಾರಿ ನೀಡಿರುವದು ಬೆಳಕಿಗೆ ಬಂದಿದೆ.
ಇಂತಹ ಹಲವಷ್ಟು ಲೋಪ ದೋಷಗಳೊಂದಿಗೆ; ಈ ಅಧಿಕಾರಿಯು ಪ್ರಸ್ತುತ ದಿನ ಗಳಲ್ಲಿಯೂ ಹಿಂದಿನ ದಿನಾಂಕ ಗಳನ್ನು ನಮೂದಿಸಿ; ಹೊಸ ಕಾಮಗಾರಿಗಳಿಗೆ ಆದೇಶಗಳನ್ನು ನೀಡುತ್ತಿರುವದು ಬೆಳಕಿಗೆ ಬಂದಿರುವದಾಗಿ; ತನಿಖಾ ಸಮಿತಿ ವರದಿ ನೀಡಿದೆ.
ಈ ಕಾರಣ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮದೊಂದಿಗೆ; ಈಗಾಗಲೇ ಲೋಪವೆಸಗಿರುವ 
(ಮೊದಲ ಪುಟದಿಂದ) ಕಾಮಗಾರಿಗಳನ್ನು ರದ್ದುಗೊಳಿಸಿ; ಅರ್ಹ ಗುತ್ತಿಗೆದಾರರಿಂದ ಮರು ಕಾಮಗಾರಿ ಟೆಂಡರ್ ನೀಡಲು ತನಿಖಾ ಸಮಿತಿ ಶಿಫಾರಸ್ಸು ಮಾಡಿದೆ.
ಅಲ್ಲದೆ, ಈ ಅಧಿಕಾರಿ ವಿರುದ್ಧ ಮುಂದಿನ ಕಾನೂನು ಕ್ರಮಕ್ಕಾಗಿ ಸೂಕ್ತ ನಿರ್ದೇಶನಕ್ಕೆ ಕೋರಿ; ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖಾಂತರ; ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಮಿತಿ ಸಲ್ಲಿಸಿದೆ.
ಇಂದಿನ ತನಿಖಾ ಸಮಿತಿಯ ಈ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿ.ಪಂ. ಸದಸ್ಯರುಗಳಾದ ಕವಿತಾ ಪ್ರಭಾಕರ್, ಅಪ್ಪಂಡೇರಂಡ  ಭವ್ಯ, ಪಿ.ಆರ್. ಪಂಕಜ, ಎಂ.ಬಿ. ಮಾದಪ್ಪ, ಬಿ.ಎನ್. ಪ್ರಥ್ಯು, ಅಧಿಕಾರಿಗಳಾದ  ಪ್ರಭು, ಶ್ರೀಧರ್ ಮೂರ್ತಿ ಇವರುಗಳು ಉಪಸ್ಥಿತರಿದ್ದರು.
ಜಿ.ಪಂ. ನೂತನ ಸಭಾಂಗಣದಲ್ಲಿ ಇಂದು ಜರುಗಿದ ಸಾಮಾನ್ಯ ಸಭೆ ಯಲ್ಲಿ; ಇಂಜಿನಿಯರ್ ಶ್ರೀಕಂಠಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಚಕಮಕಿ ನಡುವೆ ಅಧ್ಯಕ್ಷರು ಮಧ್ಯಾಹ್ನ 2 ಗಂಟೆಗೆ ತನಿಖಾ ಸಮಿತಿ ಸಭೆ ನಡೆಸಿ; ಮೇಲಿನ ನಿರ್ಧಾರ ಪ್ರಕಟಿಸಿದರು.
 

Home    About us    Contact