ಕೂಡಿಗೆ, ಜೂ. 9: ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ತೊರೆನೂರು, ಹೆಬ್ಬಾಲೆಯ ಕೆಲವು ಗ್ರಾಮಗಳಲ್ಲಿ ಯುವಕರು ಸೇರಿದಂತೆ ವಯೋವೃದ್ಧರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗುತ್ತಿರುವದು ಹೆಚ್ಚಾಗಿದ್ದು, ಈ ವ್ಯಾಪ್ತಿಯ ಯುವಕರು ಮಾರಾಟದ ಜೊತೆಯಲ್ಲಿ ಸೇವನೆಯಲ್ಲಿ ತೊಡಗಿದ್ದು, ಸೇವನೆಯ ನಂತರ ಮನಬಂದಂತೆ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಸಿಲುಕುತ್ತಿದ್ದಾರೆ.
ಕಾಲೇಜಿನ ಸಮೀಪಗಳಲ್ಲಿ ಯುವಕರನ್ನು ತಮ್ಮತ್ತ ಸೆಳೆದು ಗಾಂಜಾ ಮಾರಾಟದಲ್ಲಿ ತೊಡಗಿಸಿ ಕೊಳ್ಳುತ್ತಿರುವದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಇವರುಗಳ ವಿರುದ್ಧ ಕ್ರಮ ಕೈಗೊಂಡು ಕಠಿಣವಾದ ಶಿಕ್ಷೆ ವಿಧಿಸಲು ಪೊಲೀಸರು ಮುಂದಾಗಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಬಸವನಹಳ್ಳಿ ಸಹಕಾರ ಬ್ಯಾಂಕ್ನ ಅಧ್ಯಕ್ಷ ಎಸ್.ಎನ್. ರಾಜಾರಾವ್ ಆಗ್ರಹಿಸಿದ್ದಾರೆ.
ಕಳೆದ ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ದಂಧೆ ನಡೆಯುತ್ತಿದ್ದು, ಹೊರ ಜಿಲ್ಲೆಯ ಯುವಕರಿಗೂ ಈ ಗ್ರಾಮಗಳಿಂದ ಗಾಂಜಾ ಸರಬರಾಜಾಗುತ್ತಿದೆ ಎಂಬ ವದಂತಿ ಎಲ್ಲೆಡೆ ಕೇಳಿಬರುತ್ತಿದೆ.
ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಬರುವ ಸಂದರ್ಭ ಗಾಂಜಾ ಸೇವನೆ ಮಾಡಿದ ಕೆಲವರು ಮನಬಂದಂತೆ ಬೇರೆ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವದು ಕೇಳಿಬರುತ್ತಿದೆ.
ಗ್ರಾಮಾಂತರ ಪೊಲೀಸರು ಗಾಂಜಾ ಮಾರಾಟಗಾರರನ್ನು ಹಿಡಿದು, ಕೆಲವರನ್ನು ಬಂಧಿಸಿರುವದು ಸರಿಯಾದರೂ, ಇನ್ನುಳಿದ ಕೆಲವು ಗ್ರಾಮಗಳಲ್ಲಿ ದಂಧೆಯು ಯಥಾವತ್ತಾಗಿ ನಡೆಯುತ್ತಿರುವದರಿಂದ ಪೊಲೀಸ್ ಅಧಿಕಾರಿಗಳು ಇದರತ್ತ ಹೆಚ್ಚು ಗಮನಹರಿಸಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.