ಮಡಿಕೇರಿ, ಜು. 27: ಮಹಿಳೆ ಯೊಬ್ಬಳು ಕೊಲೆ ಬೆದರಿಕೆಯೊಡ್ಡಿರುವ ದಲ್ಲದೆ ಮಾಂಗಲ್ಯ ಸರವನ್ನು ಕೂಡ ಕಿತ್ತೊಯ್ದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ತನ್ನ ವಿರುದ್ಧವೇ ಶ್ರೀಮಂಗಲ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೈಸೊಡ್ಲೂರು ಗ್ರಾಮದ ನಿವಾಸಿ ಚೇಂದಿರ ಶಾಂತಿ ಮಾಚಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀಮಂಗಲ ಪೊಲೀಸರು ವಿನಾಕಾರಣ ತನ್ನ ಮೇಲೆ ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜು. 14 ರಂದು ಮಹಿಳೆ ಯೊಬ್ಬರು ಅವಾಚ್ಯವಾಗಿ ನಿಂದಿಸಿ, ತನ್ನ ಅಂಗಡಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು, ಅಂಗಡಿಗೆ ಹಾನಿ ಮಾಡಿದ್ದಾರೆ. ಅಲ್ಲದೆ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿ, ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುದಿಕೇರಿ ಉಪ ಠಾಣೆಗೆ ಹಾಗೂ ಶ್ರೀಮಂಗಲ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವದೇ ಕ್ರಮಕೈಗೊಂಡಿಲ್ಲ. ಬದಲಿಗೆ ದೂರು ನೀಡಿದ ತನ್ನನ್ನೇ ಅಪರಾಧಿ ಎಂದು ಬಿಂಬಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಶಾಂತಿ ಮಾಚಯ್ಯ ಆರೋಪಿಸಿದರು.

ತಾನು ಒಬ್ಬಂಟಿಯಾಗಿ ವಾಸವಿರುವದರಿಂದ ಸಂಬಂಧಿಸಿದ ಮಹಿಳೆಯಿಂದ ತನಗೆ ಜೀವಭಯವಿದೆ. ತನಗೇನಾದರೂ ಆದರೆ ಆ ಮಹಿಳೆಯೇ ನೇರ ಕಾರಣ ಎಂದು ತಿಳಿಸಿದ ಶಾಂತಿ ತನಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿರುವದಾಗಿ ತಿಳಿಸಿದರು.