ಮಡಿಕೇರಿ, ಡಿ. 2: ಅಂಧರ ಬಾಳಿನ ಬೆಳಕಾಗಿರುವ ಅಶ್ವಿನಿ ಆಸ್ಪತ್ರೆಯ ಉಚಿತ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ 30ನೇ ವರ್ಷದ ಸಂಭ್ರಮವಾಗಿದ್ದು, ಇಂದಿನಿಂದ ನೇತ್ರ ಶಸ್ತ್ರ ಚಿಕಿತ್ಸೆ ಆರಂಭಗೊಂಡಿದೆ.
ಜಿಲ್ಲೆ ಸೇರಿದಂತೆ ಹೊರಜಿಲ್ಲೆಯ ಸುಮಾರು 55 ಸ್ಥಳಗಳಲ್ಲಿ 3842 ಮಂದಿಯನ್ನು ತಪಾಸಣೆ ಗೊಳಪಡಿಸಲಾಗಿದ್ದು, 437 ಮಂದಿ ಶಸ್ತ್ರ ಚಿಕಿತ್ಸೆಗೆ ಒಳಪಡಲಿದ್ದಾರೆ. ಈ ಪೈಕಿ 3 ರಿಂದ 8 ವರ್ಷದ ಒಳಗಿನ 4 ಮಂದಿ ಮಕ್ಕಳು ಅಲ್ಲದೆ 3 ಮಂದಿ ವಿಶೇಷ ಚೇತನರೂ ಸೇರಿದ್ದಾರೆ. 9 ಮಂದಿ ಬುಡಕಟ್ಟು ಜನಾಂಗದ ಶಿಬಿರಾರ್ಥಿಗಳಿದ್ದು, ಮಹಿಳಾ ಶಿಬಿರಾರ್ಥಿಗಳೇ ಅಧಿಕ ಮಂದಿ ಇದ್ದಾರೆ.
ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಪಿರಿಯಾಪಟ್ಟಣ ತಾಲೂಕು, ಸುಳ್ಯ, ಚೆನ್ನರಾಯಪಟ್ಟಣ, ಪುತ್ತೂರು, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಹಾಗೂ ವಯನಾಡು ಗಳಿಂದ ನೇತ್ರ ಶಸ್ತ್ರ ಚಿಕಿತ್ಸೆಗೆ ಶಿಬಿರಾರ್ಥಿಗಳು ಆಗಮಿಸಿದ್ದಾರೆ. ಇಂದು ಮಧ್ಯಾಹ್ನ ಅಶ್ವಿನಿ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಅಶ್ವಿನಿಕುಮಾರ ದೇವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಾರ್ಥನೆ ಸಲ್ಲಿಸಿ ಅತಿಥಿಗಳಿಂದ ದೀಪ ಪ್ರಜ್ವಲನೆ ಮಾಡಿದ ಬಳಿಕ ನೇತ್ರ ಶಸ್ತ್ರ ಚಿಕಿತ್ಸೆಗೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮ
ಬಳಿಕ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಎಂ.ಸಿ. ಗೋಖಲೆ ಮಾತನಾಡಿ, ಅಶ್ವಿನಿ ಆಸ್ಪತ್ರೆ ವಿವಿಧ ಸಂಘ - ಸಂಸ್ಥೆಗಳ ಸಹಯೋಗದಲ್ಲಿ ಕಳೆದ 30 ವರ್ಷ ಗಳಿಂದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿ ಕೊಂಡು ಬರುತ್ತಿದೆ.
(ಮೊದಲ ಪುಟದಿಂದ) ಶಿಬಿರವು ತಾ. 5 ರಂದು ಕೊನೆಗೊಳ್ಳಲಿದೆ ಎಂದರು. ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಗಸ್ಟಿನ್ ಜಯರಾಜ್ ಮಾತನಾಡಿ, ದೃಷ್ಟಿದಾನ ಮಹಾದಾನವಾಗಿದ್ದು, ಅಶ್ವಿನಿ ಆಸ್ಪತ್ರೆಯ ಸೇವೆ ಹೀಗೆ ಮುಂದುವರೆಯಲಿ. ತಮ್ಮ ಸಂಸ್ಥೆಯ ಸಹಕಾರ ಸದಾ ಇರಲಿದೆ ಎಂದರು.
ಐಎಂಎ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ ನೇತ್ರ ಚಿಕಿತ್ಸಾ ಶಿಬಿರ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವೂ ಇದೆ. ಅಶ್ವಿನಿ ಆಸ್ಪತ್ರೆಯ ಜೊತೆಗೆ ಸಂಘ - ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಅಂಧತ್ವ ನಿವಾರಣೆಗೆ ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದರು. ರೋಟರಿ ಮಿಸ್ಟಿಹಿಲ್ಸ್ ಪದಾಧಿಕಾರಿ ಬಿ.ಜಿ. ಅನಂತಶಯನ ಮಾತನಾಡಿ, ಸಮಾಜ ಸೇವೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ರೋಟರಿ ಸಂಸ್ಥೆಯಿಂದಲೂ ಹಲವು ಸೇವಾ ಕಾರ್ಯಗಳು ನಡೆಯುತ್ತಿದ್ದು, ಅಶ್ವಿನಿ ಆಸ್ಪತ್ರೆಯೊಂದಿಗೆ ಸಹಕಾರ ನೀಡಿದೆ. ಮುಂದೆಯೂ ಸಹಕಾರವಿದೆ ಎಂದರು ಹೇಳಿದರು.
ಆಸ್ಪತ್ರೆಯ ಟ್ರಸ್ಟಿ ಜಿ. ರಾಜೇಂದ್ರ ಮಾತನಾಡಿ, ಆಸ್ಪತ್ರೆಯ ಸೇವಾ ಕಾರ್ಯಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಎಲ್ಲರಿಗೂ ಆಸ್ಪತ್ರೆ ಆಭಾರಿಯಾಗಿದೆ ಎಂದು ತಿಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿದರು. ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ಕುಮಾರ್, ಆಸ್ಪತ್ರೆ ಅಧ್ಯಕ್ಷ ಬಿ.ಕೆ. ಕೃಷ್ಣ, ಟ್ರಸ್ಟಿ ಎಸ್.ಎಸ್. ಸಂಪತ್ಕುಮಾರ್, ಡಾ. ಕುಲಕರ್ಣಿ, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಡಾ.ಬಿ.ಸಿ. ನವೀನ್, ಪ್ರಸಾದ್ ಗೌಡ, ಲಯನ್ಸ್ ಸಂಸ್ಥೆ ನಿರ್ದೇಶಕ ಅಂಬೆಕಲ್ ನವೀನ್, ವಿವಿಧ ಸಂಘ - ಸಂಸ್ಥೆಗಳ ಪ್ರಮುಖರಾದ ಕವಿತಾ ಬೊಳ್ಳಮ್ಮ, ಹೆಚ್. ಟಿ. ಅನಿಲ್, ಗೀತಾ ಮಧುಕರ್, ಚಂಗಪ್ಪ, ಸತೀಶ್, ಆಕಾಶವಾಣಿ ನಿಲಯ ನಿರ್ದೇಶಕ ರಾಘವೇಂದ್ರ ಮತ್ತಿತರರು ಇದ್ದರು.