ನಾಪೋಕ್ಲು, ಆ. 9: ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಎದುರು ಗುಂಡಿಯೊಂದು ಬಾಯ್ತೆರೆದು ನಿಂತಿದೆ. ದಿನಬೆಳಗಾದರೆ ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿನ ತಂಗುದಾಣಕ್ಕೆ ಆಗಮಿಸುತ್ತಾರೆ. ಸಮೀಪದಲ್ಲೇ ಗುಂಡಿಯೊಂದು ಬಾಯ್ತೆರೆದು ನಿಂತಿದೆ. ಸಾರ್ವಜನಿಕ ಸ್ಥಳದಲ್ಲಿ ನೀರಿನ ಚೇಂಬರ್, ಪಕ್ಕದಲ್ಲಿ ಸಿಮೆಂಟ್ ರಿಂಗ್ ಅಳವಡಿಸಿದ ಗುಂಡಿಯೊಂದಿದ್ದು ಯಾವದೇ ಮುಚ್ಚಳವಿಲ್ಲದೇ ಜೀವಹಾನಿ ತಂದೊಡ್ಡುವ ಸ್ಥಿತಿಯಲ್ಲಿ ಇದೆ. ಪಂಚಾಯಿತಿಯ ಎದುರೇ ಅಪಾಯಕ್ಕೆ ಹೊಂಚು ಹಾಕಿ ಕುಳಿತಿದೆ. ಈ ಹಿಂದೆ ಪಟ್ಟಣದ ಎದುರು ತಿರುವಿನಲ್ಲಿ ಇದ್ದ ಗುಂಡಿಯೊಂದರಲ್ಲಿ ಬಿದ್ದ ನಿವೃತ್ತ ಶಿಕ್ಷಕರು ಜೀವ ಕಳೆದುಕೊಂಡಿದ್ದರು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಪಂಚಾಯಿತಿ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿತು. ಮತ್ತದೇ ಘಟನೆ ಪುನರಾವರ್ತನೆ ಆಗುವ ಮೊದಲೇ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಾಗಿದೆ. ಬಾಯ್ತೆರೆದು ನಿಂತಿರುವ ಗುಂಡಿಗೆ ಮುಚ್ಚಳ ಅಳವಡಿಸಬೇಕಾಗಿದೆ. - ದುಗ್ಗಳ ಸದಾನಂದ