ಶ್ರೀಮಂಗಲ, ಅ. 20 : ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಹಲವು ಸಮಯ ದಿಂದ ಸದ್ದಿಲ್ಲದಿದ್ದ ಹುಲಿ ಹಾವಳಿ ಕಳೆದ 6 ತಿಂಗಳಿನಿಂದ ಮತ್ತೆ ಮರುಕಳಿಸಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿ ನಡೆಸಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಕೋವಿಯ ಮೂಲಕ ಅರವಳಿಕೆ ಮದ್ದನ್ನು ಹಾರಿಸಿ ಹುಲಿಯ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯುವದಕ್ಕೆ ಅನುಮತಿ ದೊರೆತಿದ್ದು, ಗುರುವಾರ ದಿಂದಲೇ ಕಾರ್ಯಾಚರಣೆ ಆರಂಭವಾಗಿದೆ.

ಬಾಳೆಲೆ ಗ್ರಾ.ಪಂ. ಕಚೇರಿಯಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಹುಣಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಫ್. ಮಣಿಕಂಠನ್ ಅವರು ಈ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಅರಣ್ಯ ಇಲಾಖೆಯ ಅರವಳಿಕೆ ತಜ್ಞ ಡಾ. ಉಮಾಶಂಕರ್ ಅವರ ನೇತೃತ್ವದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬುಧವಾರ ಹಾಡಹಗಲೇ ದೇವನೂರು ಗ್ರಾಮದ ಅಳಮೇಂಗಡ ರಿವಿನಾ ಮೇದಪ್ಪ ಅವರ ಹಸುವನ್ನು ಕಾರ್ಮಿಕರ ಎದುರೇ ಧಾಳಿ ನಡೆಸಿ ಕೊಂದು ಹಾಕಿದ ಸ್ಥಳಕ್ಕೆ ತೆರಳಿ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸ ಲಾಗಿದೆ ಎಂದು ತಿಳಿಸಿದರು.

ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ ಮಾತನಾಡಿ, ಕಳೆದ ಆರು ತಿಂಗಳಿನಿಂದ ಬಾಳೆಲೆ ಹಾಗೂ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 14 ಹುಲಿ ಧಾಳಿ ಪ್ರಕರಣ ನಡೆದಿದೆ. ಆರು ತಿಂಗಳ ಅವಧಿಯಲ್ಲಿ ದೇವನೂರು ಗ್ರಾಮದ ಅಳಮೇಂಗಡ ರಿವಿನಾ ಮೇದಪ್ಪ ಅವರ ಆರು ಹಸು ಹಾಗೂ ಎತ್ತುಗಳನ್ನು, ಕಳೆದ ಮೂರು ತಿಂಗಳಲ್ಲಿ ಕೊಟ್ಟಗೇರಿ ಗ್ರಾಮದ ಮಾಪಂಗಡ ಟಾಟು ಅವರ ಐದು ಹಸುಗಳನ್ನು, ದೇವನೂರು ಗ್ರಾಮದ ಲಕ್ಷ್ಮಿಕಾಂತ್ ಅವರ ಎರಡು ಕರುಗಳನ್ನು, ಒಂದು ತಿಂಗಳ ಅವಧಿಯಲ್ಲಿ, ಬಾಳೆಲೆ ಕೊಪ್ಪಲು ಗ್ರಾಮದ ಶಿವಚಾರ್ಯರ ರಘು ಅವರ ಒಂದು ಹಸುವನ್ನು ಹುಲಿ ಧಾಳಿ ನಡೆಸಿ ಕೊಂದು ಹಾಕಿದೆ. ಆದರೆ ಅರಣ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಹುಲಿ ಸೆರೆ ಹಿಡಿಯಲು ಬೋನು ಇಡುವದು, ಕ್ಯಾಮರಾ ಅಳವಡಿಸುವದು ಇಷ್ಟರಲ್ಲಿಯೇ ಪ್ರಯತ್ನಿಸುತ್ತಿದೆ. ಹುಲಿಯನ್ನು ಹುಡುಕಿ ಅದಕ್ಕೆ ಕೋವಿಯ ಮೂಲಕ ಅರವಳಿಕೆ ನೀಡುವ ಕಾರ್ಯಾಚರಣೆ ಮೂಲಕ ಮಾತ್ರ ಹುಲಿ ಸೆರೆ ಸಾಧ್ಯ ಎಂದು ಮನವರಿಕೆ ನೀಡಿದರು.

ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಕಳೆದ ಆರು ತಿಂಗಳಿನಿಂದಲೂ ಅರಣ್ಯ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಇದ್ದುದ್ದರಿಂದ ಹುಲಿ ಧಾಳಿಯಿಂದ ಹಲವಾರು ಜಾನು ವಾರುಗಳು ಸಾಯಲು ಕಾರಣವಾಯಿತು. ಕೂಡಲೆ ಎಚ್ಚೆತ್ತು ಕೊಂಡು ಹುಲಿ ಸೆರೆ ಕಾರ್ಯಚರಣೆಗೆ ಗಂಭೀರ ಪ್ರಯತ್ನ ಮಾಡದಿದ್ದರೆ ಎಲ್ಲಾ ರೈತರನ್ನು ಒಗ್ಗೂಡಿಸಿ ತೀವ್ರತರದ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ಮತ್ತೆ ಹುಲಿ ಧಾಳಿ ಮರುಕಳಿಸಿ ರೈತರ ಜಾನುವಾರುಗಳು ಬಲಿಯಾದರೆ, ಜಾನುವಾರುಗಳ ಕಳೇಬರವನ್ನು ಹುಣಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಗೆ ತಂದು ಹಾಕಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಪ್ರಕರಣದ ತೀವ್ರತೆ ಮನವರಿಕೆಯಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾರ್ಯಾಚರಣೆಯಲ್ಲಿ ಆನೆಗಳನ್ನು ಬಳಸಿಕೊಂಡು ಹುಲಿಯನ್ನು ಹುಡುಕಿ, ಹುಲಿ ಕಂಡ ತಕ್ಷಣ ಅರವಳಿಕೆ ಮದ್ದನ್ನು ಹಾರಿಸಿ ಪ್ರಜ್ಞೆ ತಪ್ಪಿಸಿ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗುವದು ಎಂದು ಹುಣಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಫ್. ಮಣಿಕಂಠನ್ ಮಾಹಿತಿ ನೀಡಿದರು.

ಈ ಸಂದರ್ಭ ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೊಕ್ಕೆಂಗಡ ಮಹೇಶ್ ಕುಮಾರ್, ಗ್ರಾ.ಪಂ. ಸದಸ್ಯ ಪೋಡಮಾಡ ಸುಕೆಶ್, ವಿ.ಎಸ್.ಅಚ್ಯುತ್ ಮತ್ತಿತರರು ಹಾಜರಿದ್ದರು.

ಪೊಲಿಸ್ ದೂರು

ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಬೊಮ್ಮಾಡು ಹಾಡಿಯಲ್ಲಿ ಗಿರಿಜನರಿಗೆ ಸರಕಾರದ ಐ.ಟಿ.ಡಿ.ಪಿ. ಯೋಜನೆಯಡಿ 40 ಆಶ್ರಯ ಮನೆ ಮಂಜೂರಾಗಿದ್ದು, ಈ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೃಷ್ಣಮೂರ್ತಿ ಎಂಬವರು ಕಾಮಗಾರಿಗೆ ತಡೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಈ ವ್ಯಾಪ್ತಿಯ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅವರ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ಅವರು ದೂರು ದಾಖಲಿಸಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಹುಣಸೂರು ಸಿ.ಸಿ.ಎಫ್. ಮಣಿಕಂಠನ್ ಅವರ ಗಮನಕ್ಕೆ ತರಲಾಯಿತು. ಈ ದೂರನ್ನು ಹಿಂಪಡೆಯಲಾಗುವದೆಂದು ಸಿ.ಸಿ.ಎಫ್. ಮಣಿಕಂಠನ್ ಭರವಸೆ ನೀಡಿದರು.

ಆಶ್ರಯ ಮನೆಯ ಬಗ್ಗೆ ಕುಟ್ಟದಿಂದ ಬಾಳೆಲೆವರೆಗಿನ ಅರಣ್ಯ ಅಂಚಿನಲ್ಲಿರುವ ಎಲ್ಲಾ ಗ್ರಾ.ಪಂ. ವ್ಯಾಪ್ತಿಯ ಜನ ಪ್ರತಿನಿಧಿಗಳೊಂದಿಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳನ್ನು ಸೇರಿಸಿ ಒಂದು ವಾರದೊಳಗೆ ಸಭೆ ನಡೆಸಲಾಗುವದು ಎಂದು ಸಿ.ಸಿ.ಎಫ್. ಭರವಸೆ ನೀಡಿದರು.

ಜಿಲ್ಲೆಯಿಂದ ಒಕ್ಕಲೆಬ್ಬಿಸಬೇಡಿ ಜಿಲ್ಲೆಯಲ್ಲಿಯೇ ಹುಟ್ಟಿ ಬೆಳೆದಂತಹ ಗಿರಿಜನರನ್ನು ಹಾಗೂ ಪಣಿಯ, ಎರವ ಜನಾಂಗದವರನ್ನು ಅರಣ್ಯದಂಚಿನಲ್ಲಿ ಅಥವಾ ಅರಣ್ಯದೊಳಗೆ ವಾಸಿಸುತ್ತಿದ್ದರೂ ಅವರನ್ನು ಒಕ್ಕಲೆಬ್ಬಿಸಬಾರದು. ಜಿಲ್ಲೆಯ ಒಳಗೆ ಅವರಿಗೆ ಪುನರ್‍ವಸತಿ ಕಲ್ಪಿಸಬೇಕು. ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಬೆಟ್ಟತೂರು ಸಮೀಪ ಬ್ಯಾಟರಾಯನಕೊಪ್ಪ ಜಾಗದಲ್ಲಿ 454 ಏಕ್ರೆ ತೇಗ ಪ್ಲಾಂಟೇಶನ್ ಇದ್ದು, ಈ ಜಾಗದಲ್ಲಿ ಮರಗಳನ್ನು ತೆರವುಗೊಳಿಸಿ ಪುನರ್‍ವಸತಿ ಕಲ್ಪಿಸಿಕೊಡಬೇಕು. ಜಿಲ್ಲೆಯವರಿಗೆ ಜಿಲ್ಲೆಯಲ್ಲಿಯೇ ಪುನರ್‍ವಸತಿಗೆ ಅವಕಾಶ ಕಲ್ಪಿಸಬೇಕು. ಟಿಬೇಟಿಯನ್ನರಿಗೆ ಜಿಲ್ಲೆಯಲ್ಲಿ ಪುನರ್‍ವಸತಿ ಕಲ್ಪಿಸಿರುವಾಗ ಜಿಲ್ಲೆಯವರನ್ನು ಏಕೆ ಒಕ್ಕಲೆಬ್ಬಿಸಿ ಜಿಲ್ಲೆಯ ಹೊರಗೆ ನೆಲೆಸಬೇಕು ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ, ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೊಕ್ಕೆಂಗಡ ಮಹೇಶ್ ಕುಮಾರ್, ಗ್ರಾ.ಪಂ. ಸದಸ್ಯ ಪೋಡಮಾಡ ಸುಕೆಶ್, ವಿ.ಎಸ್.ಅಚ್ಯುತ ಪ್ರಶ್ನಿಸಿದರು.

ತಪಾಸಣೆÉ ಕಿರುಕುಳ: ನಾಗರಹೊಳೆ ಅರಣ್ಯದ ನಡುವಿನ ಮಾರ್ಗದಲ್ಲಿ ಸ್ಥಳೀಯರು ವಾಹನದಲ್ಲಿ ಸಂಚರಿಸುವಾಗ ಅನಗತ್ಯವಾಗಿ ತಪಾಸಣೆ ಹಾಗೂ ಪುಸ್ತಕಕ್ಕೆ ಸಹಿ ಮಾಡಿಸಿಕೊಳ್ಳಲು ವಾಹನವನ್ನು ತಡೆಯಲಾಗುತ್ತದೆ. ಸ್ಥಳೀಯ ವಾಹನದಲ್ಲಿ ಹೆಂಗಸರು ಮಕ್ಕಳು ಸಂಚರಿಸುತ್ತಿದ್ದರೂ ಹಾಗೂ ಸ್ಥಳೀಯ ವಾಹನ ಎಂಬ ಅರಿವಿಕೆ ಹಾಗೂ ಪರಿಚಯವಿದ್ದರೂ ಅವುಗಳನ್ನು ನಿಲ್ಲಿಸಿ ತಪಾಸಣೆ ಮಾಡುವದು ಸರಿಯಲ್ಲ. ಕೇರಳದ ವಾಹನ ಹಾಗೂ ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡಲಿ. ಈ ಬಗ್ಗೆ ಈ ಹಿಂದೆ ಅರಣ್ಯಾಧಿಕಾರಿಗಳ ಸಭೆಯಲ್ಲಿ ಗಮನಕ್ಕೆ ತಂದರೂ ಸ್ಥಳೀಯರಿಗೆ ತೊಂದರೆ ನೀಡುವದು ನಿಂತಿಲ್ಲ. ಇದನ್ನು ಸರಿಪಡಿಸುವಂತೆ ಸಿ.ಸಿ.ಎಫ್. ಬಳಿ ಆಗ್ರಹಿಸಿದರು.

ದೂರು ಖಂಡನೆ: ಅರಣ್ಯ ಇಲಾಖೆಯ ಸಿಬ್ಬಂದಿ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅವರ ಮೇಲೆ ಕುಟ್ಟ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ವಿವಿಧ ಸಂಘ - ಸಂಸ್ಥೆ ಹಾಗೂ ಜನಪ್ರತಿನಿಧಿಗಳು ಖಂಡಿಸಿದ್ದಾರೆ. ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಜಿ.ಪಂ ಸದಸ್ಯ ಶಿವು ಮಾದಪ್ಪ, ತಾ.ಪಂ. ಸದಸ್ಯರಾದ ಪಲ್ವೀನ್ ಪೂಣಚ್ಚ, ಎಂ.ಬಿ. ಸುನಿತಾ, ಕೆ,ಬಾಡಗ ಗ್ರಾ.ಪಂ. ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾನೂರು ಗ್ರಾ.ಪಂ. ಸದಸ್ಯ ಕಾಡ್ಯಮಾಡ ಬೋಪಣ್ಣ, ನಾಲ್ಕೇರಿ ಗ್ರಾ.ಪಂ ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ, ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಪೋರಂಗಡ ಪವನ್ ಖಂಡಿಸಿದ್ದು ಜನಪ್ರತಿನಿಧಿಯೊಬ್ಬರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನಪ್ರತಿನಿಧಿಯ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಹೇಳಿದ್ದಾರೆ. ಕೂಡಲೇ ದೂರನ್ನು ವಾಪಸ್ಸು ಪಡೆಯ ದಿದ್ದರೆ ಪ್ರತಿಭಟನೆ ಎಚ್ಚರಿಕ್ಕೆÀ ನೀಡಿದ್ದಾರೆ.