ಸುಂಟಿಕೊಪ್ಪ, ಅ. 1: ಕಷ್ಟಪಟ್ಟು ಕೂಡಿಗಳಿಸಿದ ಆಭರಣಗಳನ್ನು ಧರಿಸುವಾಗ ಎಚ್ಚರ ತಪ್ಪಿದರೆ ಕಳ್ಳರ ಪಾಲಾಗಲಿದ್ದು, ಈ ಬಗ್ಗೆ ಮಹಿಳೆಯರು ಎಚ್ಚರ ವಹಿಸುವದು ಅಗತ್ಯ ಎಂದು ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ತಿಳಿ ಹೇಳಿದರು.

ಇಲ್ಲಿನ ಮಲಯಾಳಿ ಸಂಘದ 10 ನೇ ವಾರ್ಷಿಕೋತ್ಸವ ಅಂಗವಾಗಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಓಣಂ ಆಚರಣಾ ಸಾಂಸ್ಕøತಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿನ್ನಾಭರಣಗಳನ್ನು ಧರಿಸಿಕೊಂಡು ಸಂತೋಷಕೂಟ ಸಮಾರಂಭಗಳಿಗೆ ತೆರಳುವಾಗ ಮಹಿಳೆಯರು ಜಾಗರೂಕತೆಯಿಂದ ಇರಬೇಕು. ಮೈಮರೆತು ಕುಳಿತುಕೊಳ್ಳದೆ ಧರಿಸಿರುವ ಆಭರಣಗಳ ಬಗ್ಗೆ ನೀವೇ ಹೆಚ್ಚು ಎಚ್ಚರವಹಿಸುವಂತೆ ಸೂಚಿಸಿದರು.

ಮನೆಯಲ್ಲಿ ನೀವು ಹಣ ಹಾಗೂ ಚಿನ್ನಾಭರಣಗಳನ್ನು ಇರಿಸಿಕೊಂಡು ಸಭೆ-ಸಮಾರಂಭ ಊರುಗಳಿಗೆ ತೆರಳುವ ಸಂದರ್ಭ ನಿಮ್ಮ ಅಕ್ಕ ಪಕ್ಕದ ನಿವಾಸಿಗಳಿಗೆ ಸೂಚಿಸಿ ತೆರಳುವದು ಅಥವಾ ಹಣ ಮತ್ತು ಚಿನ್ನವನ್ನು ಬ್ಯಾಂಕಿನ ಭದ್ರತೆಯಲ್ಲಿ ಇರಿಸುವದು ಸೂಕ್ತ.

ಇಲ್ಲದಿದ್ದರೆ ಕಷ್ಟಪಟ್ಟು ಸಂಪಾದಿಸಿದ ಅಸ್ತಿಯು ಸುಲಭವಾಗಿ ಕಳ್ಳರ ಪಾಲಿಗೆ ದಕ್ಕಲಿದೆ ಎಂದರು. ಆದ್ದರಿಂದ ಸೂಕ್ತ ಭದ್ರತೆ ವಹಿಸುವಂತೆ ಅನೂಪ್ ಮಾದಪ್ಪ ಕಿವಿಮಾತು ಹೇಳಿದರು.

ಶ್ರೀ ರಾಮ ಸೇವಾ ಸಮಿತಿ ಕಾರ್ಯದರ್ಶಿ ಆರ್. ಸುದರ್ಶನ್ ನಾಯ್ಡು ಮಾತನಾಡಿ, ಸಮಾಜಗಳು ಗ್ರೂಪ್ ಇಶ್ಸೂರೆನ್ಸ್ ಮಾಡುವದರಿಂದ ಸಮಾಜದ ಬಡ ಜನರಿಗೆ ಇದರ ಸದುಪಯೋಗಪಡೆದುಕೊಳ್ಳ ಬಹುದಾಗಿದ್ದು, ಇದನ್ನು ಕೂಡಲೇ ಮಲಯಾಳಿ ಸಮಾಜ ಬಾಂಧವರು ಕೈಗೊಳ್ಳುವಂತೆ ಸಮಾಜದ ಪದಾಧಿಕಾರಗಳಿಗೆ ಮಾಹಿತಿ ನೀಡಿದರು. ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ. ಪೊನ್ನಪ್ಪ (ಕ್ಲೈವ) ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಮಾತನಾಡಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ಮಳೆಯ ನಡುವೆ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ಭವ್ಯ ಮಂಟಪದಲ್ಲಿ ಇರಿಸಿ ಕೇರಳದ ಪ್ರಸಿದ್ಧ ವಳ್ಳಕಳಿ ಸ್ತಬ್ಧಚಿತ್ರ ಹಾಗೂ ಆಟೋ ರಿಕ್ಷಾದಲ್ಲಿ ಆನೆಯ ಸ್ತಬ್ಧ ಚಿತ್ರಗಳನ್ನು ನಿರ್ಮಿಸಿ ಕೇರಳದ ಚಂಡೆ ಮೇಳದೊಂದಿಗೆ ಹಳದಿ ಧ್ವಜ ಹಿಡಿದು ಮಹಿಳೆಯರು, ಪುರುಷರು, ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿದರು.

ನಂತರ ಸಾಂಸ್ಕøತಿಕ ಮಲಯಾಳಿ ಬಾಂಧವರಿಂದ ಸಾಂಸ್ಕøತಿಕ ಕಾರ್ಯಕ್ರಮ ಕೇರಳದ ತ್ರಿಶೂರಿನ ನನ್ಮ ತಂಡದವರಿಂದ ಮಿಮಿಕ್ರಿ ಮತ್ತು ಕಾಮಿಡಿ ಶೋ ನಡೆಯಿತು. ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.