ಬೆಂಗಳೂರು, ಡಿ. 22: ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್. ದೊರೆಸ್ವಾಮಿ, ಡಾ|| ವಿಜಯಮ್ಮ, ಸಿ.ಎಸ್. ದ್ವಾರಕನಾಥ್ ನೇತೃತ್ವದಲ್ಲಿ ಇಂದು ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ತುರ್ತು ಸಭೆ ನಡೆಸಲಾಯಿತು.

ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ಭೇಟಿ ಮಾಡಲಾಯಿತು. ದಿಡ್ಡಳ್ಳಿ ಆದಿವಾಸಿಗಳ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆಯನ್ನು ವಿವರಿಸಲಾಯಿತು.

(ಮೊದಲ ಪುಟದಿಂದ) ಸಮಿತಿಯ ಹಕ್ಕೊತ್ತಾಯಗಳಿಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ತಕ್ಷಣವೇ ಆದಿವಾಸಿಗಳಿಗೆ ತಾತ್ಕಾಲಿಕ ವಾಸದ ವ್ಯವಸ್ಥೆಗಾಗಿ 99 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವ ಆದೇಶ ಮಾಡಿದರು. ಜೊತೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಊಟ, ನೀರು ಮತ್ತು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಎಂ.ಆರ್. ಸೀತಾರಾಂ ಅವರು ಜ. 2 ರಂದು ಸಂಬಂಧಪಟ್ಟ ಇಲಾಖೆಗಳ ಸಚಿವರು, ಕಾರ್ಯದರ್ಶಿಗಳು, ಆದಿವಾಸಿ ಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ದಿನ ಗೊತ್ತುಪಡಿಸಿದರು. ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಆದಿವಾಸಿಗಳ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ತನಿಖೆ ಆರಂಭಿಸುವ ಹಾಗೂ ಉಳಿದ ಸಮಸ್ಯೆಗಳ ಬಗ್ಗೆಯೂ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.

ತಂಡದಲ್ಲಿ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್, ಕರ್ನಾಟಕ ಜನಶಕ್ತಿ ಸಂಚಾಲಕರಾದ ಮಲ್ಲಿಗೆ ಮತ್ತು ಸಂಜಯ್, ದಸಂಸ ಸಂಯೋಜಕ ವಿ. ನಾಗರಾಜ್, ಸ್ವರಾಜ್ ಅಭಿಯಾನದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕುಮಾರ್ ಸಮತಳ, ವಾಸು ಹೆಚ್ ವಿ. ಕರ್ನಾಟಕ ಶ್ರಮಿಕ ಶಕ್ತಿಯ ವರದರಾಜು, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ನಿಹಾರಿಕ, ದಲಿತ ಸ್ವಾಭಿಮಾನಿ ಸಂಘನೆಯ ಕೋದಂಡರಾಮ, ಪಿ.ಮೂರ್ತಿ, ಪ್ರಕಾಶನದ ಚೆ ಬಾಲು, ರಾಜಕುಮಾರ್ ಶಹಾಪುರ್, ಭಾಗವಹಿಸಿದ್ದರು.