ಶನಿವಾರಸಂತೆ, ಸೆ. 9: ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಾರಳ್ಳಿ ಗ್ರಾಮದಲ್ಲಿ ಸರ್ವೆ ನಂ. 33/1ರಲ್ಲಿ 66 ಎಕರೆ ಪೈಸಾರಿ ಜಾಗವಿದ್ದು, ಅದರಲ್ಲಿ ಸುಮಾರು 51 ಎಕರೆ ಜಾಗವನ್ನು ಕೆಲವು ಬಂಡವಾಳ ಶಾಹಿಗಳು ಒತ್ತುವರಿ ಮಾಡಿಕೊಂಡು ತೋಟಗಳನ್ನು ಮಾಡಿಕೊಂಡಿದ್ದಾರೆ. ಈಗ ಉಳಿದಿರುವ 5 ಎಕರೆ ಪೈಸಾರಿ ಜಾಗದಲ್ಲಿ ಸುಮಾರು 25 ಮಂದಿ ಬುಧವಾರ ರಾತೋರಾತ್ರಿ ಅತಿಕ್ರಮಣ ಮಾಡಿರುವ ಬಗ್ಗೆ ತಾ.7ರ ‘ಶಕ್ತಿ'ಯಲ್ಲಿ ವರದಿಯಾಗಿದೆ ಎಂದು ಆ ಜಾಗವನ್ನು ತೆರವುಗೊಳಿಸಿ ಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ಶಕ್ತಿ ಪತ್ರಿಕೆಯನ್ನು ಪ್ರದರ್ಶಿಸಿದ ಪ್ರಸಂಗ ಎದುರಾಯಿತು.

ಕೊಡ್ಲಿಪೇಟೆಯ ನಾಡಕಚೇರಿ ಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡುತ್ತಾ, ಕಣಾರಳ್ಳಿ ಗ್ರಾಮದಲ್ಲಿ ಪೈಸಾರಿ ಜಾಗ ಅತಿಕ್ರಮಣ ಆಗಿದೆ. ಅತಿಕ್ರಮಣವನ್ನು ತೆರವು ಗೊಳಿಸುವಂತೆ ಕಂದಾಯ ಇಲಾಖೆಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡುತ್ತಾ, ಕಣಾರಳ್ಳಿ ಗ್ರಾಮದ ಪೈಸಾರಿ ಜಾಗಕ್ಕೆ ಪ್ರವೇಶ ಮಾಡಿದ ಹಾಗೂ ಅದಕ್ಕೆ ಪ್ರಚೋದನೆ ನೀಡಿದವರನ್ನು ಸೇರಿಸಿ ಮೊಕದ್ದಮೆ ದಾಖಲಿಸಬಹುದು ಎಂದರು. ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ತಹಶೀಲ್ದಾರ್ ಕೃಷ್ಣ ಅವರುಗಳು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೊಡ್ಲಿಪೇಟೆಯ ಪ್ರಮುಖ ನಾಗರಿಕರಾದ ಯತೀಶ್‍ಕುಮಾರ್, ಸುಬ್ರಮಣ್ಯ, ಬಿ.ಕೆ. ಯತೀಶ, ವಿಜಯ, ಜಿ.ಪಂ. ಸದಸ್ಯ ಪುಟ್ಟರಾಜ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್, ಪ್ರಸಾದ್, ದಿನೇಶ್, ವಿಜಯ, ಭೂಪಾಲ್, ಎನ್.ಎನ್. ಸೋಮಣ್ಣ, ಸಂಘ- ಸಂಸ್ಥೆಯ ಪ್ರಮುಖರು ನಾಡಕಚೇರಿಯ ಪರಿವೀಕ್ಷಕ ದೇವರಾಜ್, ಗ್ರಾಮ ಸಹಾಯಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.