ಕುಶಾಲನಗರ, ನ. 14: ರಾಜ್ಯದ ಜನತೆ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ಕುಶಾಲನಗರ ಸರಕಾರಿ ಬಾಲಕಿಯರ ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ವಿ.ಪಿ.ನಾಗೇಶ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಶುದ್ಧ ಕನ್ನಡ ಬರಹ-ಪ್ರಬಂಧ ಸ್ಪರ್ಧಾ ಕಾರ್ಯಕ್ರಮಕ್ಕೆ ಸ್ಥಳೀಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆ ಯಾವದೇ ಆಗಿದ್ದರೂ ಕೂಡ
ದೈನಂದಿನ ಚಟುವಟಿಕೆ ಸಂದರ್ಭ ಕನ್ನಡ ಭಾಷೆ ಬಳಸುವ ಮೂಲಕ ನಾಡಿನ ಋಣ ತೀರಿಸಬೇಕಿದೆ. ವಿದ್ಯಾರ್ಥಿಗಳು ಆಂಗ್ಲ ಭಾಷಾ ವ್ಯಾಮೋಹಕ್ಕೆ ಬಲಿಯಾಗದೆ ಕನ್ನಡ ಭಾಷೆಯನ್ನು ಗೌರವಿಸಿ ಬೆಳೆಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಸಿಎಂ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಕನ್ನಡಪರ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯ. ಇದರಿಂದ ದೊರೆಯುವ ಅನುಭವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿದರು. ಜಿಲ್ಲಾ ಖಜಾಂಚಿ ಹೆಚ್.ಹೆಚ್. ಸುಂದರ್ ಪ್ರಾಸ್ತಾವಿಕ ನುಡಿಗಳಾಡಿದರು.
ಈ ಸಂದರ್ಭ ಜಿಲ್ಲಾ ಪದಾಧಿಕಾರಿ ನಂಜುಂಡಸ್ವಾಮಿ, ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿರ್ದೇಶಕ ಈಶ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪ, ಶಿಕ್ಷಕರಾದ ಹೆಚ್.ಎಂ. ವೆಂಕಟೇಶ್, ಮೂರ್ತಿ ಇದ್ದರು. ಶಿಕ್ಷಕ ಉ.ರಾ. ನಾಗೇಶ್ ಕಾರ್ಯಕ್ರಮ ನಿರೂಪಿಸಿ ದರು, ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು.