ಮಡಿಕೇರಿ, ನ.25 :ಜಿಲ್ಲೆಯ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವದನ್ನು ಸಹಿಸಲಾಗದ ಕಾಂಗ್ರೆಸಿಗರು ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಮನ್ಸೂರ್ ಆಲಿ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರ ಪಕ್ಷಗಳನ್ನು ಟೀಕೆ ಮಾಡುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷÀ ಕೆ.ಎ. ಯಾಕೂಬ್ ಮೊದಲು ತಮ್ಮ ಪಕ್ಷದೊಳಗಿನ ಗೊಂದಲವನ್ನು ಸರಿಪಡಿಸಿಕೊಳ್ಳಲಿ ಎಂದು ಅಸಮಾಧಾನ ವ್ಯಕ್ತÀಪಡಿಸಿದರು.

ಐಗೂರು ಮಸೀದಿಯಲ್ಲಿ ಕುರಾನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆಯೇ ಹೊರತು ಜೆಡಿಎಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದರು. ಜೆಡಿಎಸ್ ಅಲ್ಪಸಂಖ್ಯಾತರ

(ಮೊದಲ ಪುಟದಿಂದ) ಘಟಕ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಟೀಕೆ ಮಾಡಿರುವದು ಖಂಡನೀಯ. ಘಟನೆ ನಡೆದ ತಕ್ಷಣ ಮೊದಲು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಸ್ಥಳಕ್ಕೆ ಭೇಟಿ ನಿಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಆದರೆ, ಕಾಂಗ್ರೆಸ್ಸಿಗರಂತೆ ಜೆಡಿಎಸ್ ಪ್ರಚಾರ ಪಡೆದುಕೊಂಡಿಲ್ಲವೆಂದು ಮನ್ಸೂರ್ ಆಲಿ ತಿಳಿಸಿದರು.

ಘಟನೆ ನಡೆದು ಇಷ್ಟು ದಿನಗಳೆ ಕಳೆÉದಿದ್ದರು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮುಸಲ್ಮಾನರಿಗೆ ಸಾಂತ್ವನ ಹೇಳುವ ಮತ್ತು ಸೂಕ್ತ ಕ್ರಮ ಕೈಗೊಳ್ಳುವ ಯಾವದೇ ಪ್ರಕ್ರಿಯೆಗಳನ್ನು ಕಾಂಗ್ರೆಸ್ ಪಕ್ಷ ನಡೆಸಿಲ್ಲ. ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಏನನ್ನೂ ನೀಡದ ಕಾಂಗ್ರೆಸ್ ಸರ್ಕಾರ, ಕಳೆದ ವರ್ಷದ ಟಿಪ್ಪು ಜಯಂತಿ ಸಂದರ್ಭ ಲಾಟಿ ಏಟಿನ ರುಚಿಯನ್ನಷ್ಟೇ ತೋರಿಸಿದೆ ಎಂದು ಮನ್ಸೂರ್ ಆಲಿ ಟೀಕಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದು, ಇದಕ್ಕೆ ಅಲ್ಪಸಂಖ್ಯಾತರು ಕಿವಿಗೊಡಬಾರದೆಂದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮಡಿಕೆÉೀರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಅವರು ಗೆಲ್ಲಿಸಿದ್ದಾರೆಯೇ ಹೊರತು, ಇದರಲ್ಲಿ ಜೆಡಿಎಸ್ ಪಾತ್ರವಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಕಳೆದ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದುಕೊಂಡಿರುವ ಮತವೆಷ್ಟು ಎನ್ನುವ ಬಗ್ಗೆ ಯಾಕೂಬ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ವೀರಾಜಪೇಟೆ ಘಟಕದ ಪ್ರಮುಖ ಮತೀನ್ ಮಾತನಾಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಉತ್ಸಾಹದಿಂದ ಪಕ್ಷವನ್ನು ಬೆಳೆಸುತ್ತಿರುವದರಿಂದ ಭಯಗೊಂಡಿರುವ ಕಾಂಗ್ರೆಸ್ಸಿಗರು ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಯಾವದೇ ಅನುದಾನವನ್ನು ಬಿಡುಗಡೆಮಾಡಿಲ್ಲವೆಂದು ಟೀಕಿಸಿದ ಅವರು, ಯಾಕೂಬ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವದೇ ಗೌರವ ದೊರಕುತ್ತಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ರಶೀದ್, ಪ್ರಮುಖರಾದ ಸಕ್ಲೇನ್, ಅಬೂಬಕ್ಕರ್ ಹಾಗೂ ಅಬ್ರಾರ್ ಉಪಸ್ಥಿತರಿದ್ದರು.