ಕುಶಾಲನಗರ, ಜೂ. 6: ಕೊಡಗು ಜಿಲ್ಲೆಯಲ್ಲಿ ಕೇರಳ ಮಾದರಿ ಕಾನೂನು ಜಾರಿಗೆ ತರುವ ಮೂಲಕ ಕೃಷಿ ಕ್ಷೇತ್ರದ ರಕ್ಷಣೆ ಆಗಬೇಕಾಗಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಕೈಗಾರಿಕೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಯೋಗ್ಯವಾದ ಜಮೀನು ಪರಿವರ್ತನೆಗೊಳ್ಳುವದರೊಂದಿಗೆ ಕಾಫಿ ತೋಟ, ಭತ್ತದ ಗದ್ದೆಗಳು ಕ್ಷೀಣಿಸುತ್ತಿವೆ. ಈ ಮೂಲಕ ಪ್ರವಾಸಿಗರಿಗೆ ರೆಸಾರ್ಟ್ ರೂಪುಗೊಂಡು ಜಿಲ್ಲೆಯ ಪರಿಸರ ಸಂಪೂರ್ಣ ಬದಲಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಕೃಷಿ, ಕಾಫಿ, ಏಲಕ್ಕಿ ತೋಟಗಳನ್ನು ಉಳಿಸಿ ಭೂಮಿ ಪರಿವರ್ತನೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಾಗಿದೆ ಎಂದ ನಾಣಯ್ಯ ಅವರು, ಜಿಲ್ಲೆಯ ಗ್ರೀನ್ ಬೆಲ್ಟ್ ನಾಶಗೊಳ್ಳುವದರೊಂದಿಗೆ ಕೊಡಗನ್ನು ಕೋಲಾರವಾಗಿ ಪರಿವರ್ತನೆಗೊಳಿಸುವ ಹುನ್ನಾರ ನಡೆಯುತ್ತಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಲಗ್ಗೆ ಇಡುವದರೊಂದಿಗೆ ಕೊಡಗಿನ ಜನತೆ ಪರಕೀಯ ರಾಗುತ್ತಿದ್ದಾರೆ. ಜೀವನದಿ ಕಾವೇರಿ ಬರಡಾಗುವದರೊಂದಿಗೆ ಮುಂದಿನ ದಿನಗಳಲ್ಲಿ ಮೈಸೂರು, ಮಂಡ್ಯ, ಬೆಂಗಳೂರು ಭಾಗದ ಜನತೆ ಸಂಕಷ್ಟಕ್ಕೆ ಈಡಾಗುವದು ನಿಶ್ಚಿತ ಎಂದರು.

ಮರಳು ಮಾಫಿಯ ಮೂಲಕ ನದಿ ತಟಗಳಲ್ಲಿ ಜೆಸಿಬಿ ಘರ್ಜನೆ ಅತಿಯಾಗಿದ್ದು, ನದಿಯ ಮೂಲಸ್ವರೂಪವೇ ಬದಲಾಗುತ್ತಿದೆ ಎಂದು ತಿಳಿಸಿದ ನಾಣಯ್ಯ ಅವರು, ಸಚಿವರುಗಳು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮೀಟರ್ ಬಡ್ಡಿಯನ್ನು ಮಟ್ಟ ಹಾಕುವ ಮೂಲಕ ರೈತರ ಶೋಷಣೆಯನ್ನು ತಪ್ಪಿಸಬೇಕಾಗಿದೆ ಎಂದ ನಾಣಯ್ಯ ಅವರು, ಪಾನ್ ಬ್ರೋಕರ್ಸ್, ಲೇವಾದೇವಿದಾರರ ಮೇಲೆ ನಿಗಾವಹಿಸಿ ಕಟ್ಟು ನಿಟ್ಟಾಗಿ ಕಾನೂನು ರೂಪಿಸಿ ರೈತರನ್ನು ಕಾಪಾಡಬೇಕಾಗಿದೆ ಎಂದರು.

ನಾಣಯ್ಯ ಅವರ ಮಾತಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೊಡಗು ಜಿಲ್ಲೆಯಲ್ಲಿ ಜಮೀನು ಪರಿವರ್ತನೆ ಗೊಳ್ಳುವ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಕೃಷಿ ಕ್ಷೇತ್ರದ ರಕ್ಷಣೆಗೆ ಜಿಲ್ಲಾಡಳಿತದ ಮೂಲಕ ವರದಿ ತರಿಸಿ ಸರಕಾರದಿಂದ ಎಲ್ಲಾ ರೀತಿಯ ಕ್ರಮಕ್ಕೆ ಮುಂದಾಗುವದಾಗಿ ಸಚಿವರು ತಿಳಿಸಿದರು.