ಗೋಣಿಕೊಪ್ಪಲು, ಅ. 5: ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ತಾ. 7 ರಂದು ಕಾವೇರಿ ಕಲಾ ವೇದಿಕೆ ಆವರಣದಲ್ಲಿ ಮಹಿಳಾ ಕ್ರೀಡಾಕೂಟ ನಡೆಸಲಾಗುವದು ಎಂದು ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ತಿಳಿಸಿದ್ದಾರೆ. ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಮಹಿಳಾ ಕ್ರೀಡಾಕೂಟ, ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ತಾ. 10 ರಂದು ಪರಿಮಳ ಮಂಗಳ ವಿಹಾರದಲ್ಲಿ ಮಹಿಳಾ ದಸರಾ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮಹಿಳಾ ದಸರಾ

ಮಹಿಳಾ ದಸರಾ ಸಮಿತಿ ವತಿಯಿಂದ ತಾ. 10 ರಂದು ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಮಹಿಳಾ ದಸರಾ ನಡೆಯಲಿದೆ ಎಂದು ಮಹಿಳಾ ದಸರಾ ಸಮಿತಿ ಖಜಾಂಚಿ ಪ್ರಭಾವತಿ ತಿಳಿಸಿದ್ದಾರೆ.

3 ನೇ ವರ್ಷದ ಮಹಿಳಾ ದಸರಾದಲ್ಲಿ ವಿವಿದ ಕ್ರೀಡಾಕೂಟ ಹಾಗೂ ಮನರಂಜನಾ ಪೈಪೋಟಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 2 ವರ್ಷಗಳಲ್ಲಿ ಮಹಿಳಾ ದಸರಾ ಆಚರಿಸುವ ಮೂಲಕ ನಾವು ದಾಖಲಾತಿಗಳನ್ನು ಇಟ್ಟಿದ್ದೇವೆ. ಆದರೆ, ಮತ್ತೊಂದು ಸಮಿತಿ ಮಹಿಳಾ ದಸರಾ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.

ಅವರು ನಡೆಸುವ ಕ್ರೀಡಾಕೂಟ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯುವದರಿಂದ ಅಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳಿವೆ. ದಸರಾ ಸಮಿತಿಯಿಂದ ಕೂಡ ಅವರಿಗೆ ಅನುದಾನ ಸಿಗಲಿದೆ. ಆದರೂ ಸಾರ್ವಜನಿಕರಿಂದ ಹಣ ಪಡೆಯುವ ಮೂಲಕ ಮಹಿಳಾ ದಸರಾ ಆಚರಣೆಗೆ ಗೊಂದಲವನ್ನುಂಟು ಮಾಡುತ್ತಿದ್ದಾರೆ. ನಮ್ಮನ್ನು ಕೇಳದೆ ಮಹಿಳಾ ದಸರಾ ಎಂಬ ಹೆಸರಿನಲ್ಲಿ ನಮ್ಮಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಸರ್ಕಾರದ ಹಣವನ್ನು ಬಳಕೆ ಮಾಡಿಕೊಂಡು ಮತ್ತೆ ಸಾರ್ವಜನಿಕ ವಂತಿಗೆ ಎಷ್ಟು ಸರಿ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗುವದು. ಅವರು 3 ಬಾರಿ ಮಹಿಳಾ ದಸರಾ ಆಚರಿಸಿರುವ ಬಗ್ಗೆ ದಾಖಲಾತಿ ಒದಗಿಸಲಿ ಎಂದರು. ಎಲ್ಲಾ ವರ್ಗದವರನ್ನು ಸೇರಿಸಿ ನಾಡ ಹಬ್ಬವಾಗಿ ಆಚರಿಸುತ್ತಿದ್ದೇವೆ. ಮಹಿಳೆಯರನ್ನು ಒಂದಾಗಿಸುವ ನಮ್ಮ ಪ್ರಯತ್ನ ನಮ್ಮಿಂದ ಸಾಗಿದೆ ಎಂದರು.

ಗೋಷ್ಠಿಯಲ್ಲಿ ಮಹಿಳಾ ದಸರಾ ಪ್ರ. ಕಾರ್ಯದರ್ಶಿ ಎಂ ಮಂಜುಳಾ, ಸದಸ್ಯರುಗಳಾದ ಸುಲೇಖಾ, ಯಾಸ್ಮಿನ್, ಧನಲಕ್ಷ್ಮಿ ಹಾಗೂ ಶಾಹಿನಾ ಉಪಸ್ಥಿತರಿದ್ದರು.