ವೀರಾಜಪೇಟೆ, ಜ 07: ಕಾವೇರಿ ನದಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಧ್ಯದಲ್ಲಿಯೇ ವಿದ್ಯಾರ್ಥಿಗಳ ಬೃಹತ್ ಜಾಗೃತಿ ಆಂದೋಲನ ಹಮ್ಮಿಕೊಳ್ಳಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಚಿಂತನೆ ನಡೆಸಿದೆ ಎಂದು ಆಂದೋಲನದ ರಾಜ್ಯ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಶನೇಶ್ವರ ಭಕ್ತಜನ ಮಂಡಳಿ ವತಿಯಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಮಂಡಳಿಯ ಸಂಸ್ಥಾಪಕರಾದ ದಿ: ವಿ.ಜಿ.ಕೃಷ್ಣಪ್ಪಸ್ವಾಮಿ ಯವರ ಜ್ಞಾಪಕಾರ್ಥವಾಗಿ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾವೇರಿ ಮೂಲ ಕ್ಷೇತ್ರ ತಲಕಾವೇರಿಯಿಂದ ಕೊಡಗು ಜಿಲ್ಲೆಯ ಗಡಿಭಾಗ ಶಿರಂಗಾಲ ತನಕ ಕಾವೇರಿ ನದಿ ತಟದ ವ್ಯಾಪ್ತಿಯ ಶಾಲಾ ಕಾಲೇಜುಗಳ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಮೂಲಕ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜೀವನದಿ ಕಾವೇರಿಯ ರಕ್ಷಣೆಗೆ ಕಾರ್ಯಯೋಜನೆ ರೂಪಿಸ ಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀ ಶನೇಶ್ವರ ಭಕ್ತಜನ ಮಂಡಳಿಯ ಸಂಚಾಲಕರಾದ ಯುವರಾಜ್ ಕೃಷ್ಣ, ನದಿ ಕಲುಷಿಕೆ ತಪ್ಪಿಸಲು ನದಿ ತಟದ ಜನರಿಗೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಮೂರ್ನಾಡು ಬೇತ್ರಿ ಬಳಿ ಕಾವೇರಿ ನದಿ ತಟದಲ್ಲಿ ಈ ತಿಂಗಳ ಹುಣ್ಣಿಮೆಯಂದು ನದಿ ಮಹಾ ಆರತಿ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ತಿಳಿಸಿದರು.

ಮಂಡಳಿಯ ಪ್ರಮುಖರಾದ ಅಜಯ್, ಜೀವನ್‍ಜ್ಯೋತಿ, ಸೇವಾದಳದ ಅಧ್ಯಕ್ಷರಾದ ಎಂ.ಎಲ್. ಸೈನುದ್ದಿನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾ ಸಂಚಾಲಕ ರೀನಾ ಪ್ರಕಾಶ್, ಡಿ.ಆರ್. ಸೋಮಶೇಖರ್, ಬಿ.ಡಿ. ಅಣ್ಣಯ್ಯ, ಜಗದೀಶ್, ವೈಶಾಖ್ ಮತ್ತಿತರರು ಇದ್ದರು.