ಸೋಮವಾರಪೇಟೆ, ಸೆ. 24: ತಾ. 19 ರಂದು ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದ ಟಿಂಬರ್ ಲಾರಿ ಅವಘಡದಲ್ಲಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕರೋರ್ವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಐಗೂರು ಗ್ರಾಮ ನಿವಾಸಿ ಶಿವರಾಮು (40) ಎಂಬವರೇ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದವರು. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಕಳೆದ ತಾ. 19ರಂದು ಸಂಜೆ ಕಿರಗಂದೂರು ಗ್ರಾಮದ ದಿವಂಗತ ಕೆ.ಟಿ. ಪೂವಯ್ಯ ಅವರ ಮನೆಯ ಸಮೀಪ ಟಿಂಬರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಮಗುಚಿಕೊಂಡಿತ್ತು. ಪರಿಣಾಮ ಲಾರಿಯಲ್ಲಿದ್ದ ರಾಮು ಮತ್ತು ಸತೀಶ್ ಅವರುಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಿವರಾಮು, ಎಂ. ಮುರುಗ, ಮಂಜು, ಲೋಕನಾಥ್, ಮುರುಗ, ರಾಮದಾಸ್ ಮತ್ತು ಲಾರಿ ಚಾಲಕ ಸುನಿಲ್ ಅವರುಗಳಿಗೂ ಗಾಯಗಳಾಗಿತ್ತು.

ಇದರಲ್ಲಿ ಶಿವರಾಮು ಅವರ ಸ್ಥಿತಿ ಗಂಭೀರವಾಗಿತ್ತು. ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿಗೆ, ಅಲ್ಲಿಂದ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸಾಗಿಸಲಾಯಿತು. ಸೊಂಟದ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿದ್ದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಲಾರಿ ಅವಘಡದಿಂದ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿದಂತಾಗಿದೆ.

ಅಂದಿನ ಅವಘಡದಿಂದ ಕಾಲುಗಳ ಮೂಳೆ ಮುರಿತಕ್ಕೊಳಗಾಗಿದ್ದ ಮುರುಗ ಅವರ ಎಡಗಾಲನ್ನು ತುಂಡರಿಸಿ ತೆಗೆಯಲಾಗಿದೆ. ಘಟನೆಯಿಂದ ಎಡಗಾಲಿನ ಮೂಳೆಗಳು ತೀವ್ರತರದಲ್ಲಿ ಮುರಿತಕ್ಕೊಳಗಾಗಿದ್ದ ಹಿನ್ನೆಲೆ ವೈದ್ಯರು ಕಾಲನ್ನು ತೆಗೆದಿದ್ದಾರೆ. ಸದ್ಯ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಿಂದ ಹಾಸನದ ಆಸ್ಪತ್ರೆಗೆ ಮುರುಗ ಅವರನ್ನು ಸಾಗಿಸಲಾಗಿದೆ.

ಇದರೊಂದಿಗೆ ಮಂಜು ಅವರ ಕಾಲಿಗೆ ತೀವ್ರ ಪೆಟ್ಟು ಬಿದ್ದಿರುವದರಿಂದ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ಲಾರಿ ಅವಘಡದಿಂದ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಂತಾಗಿದೆ. ಘಟನೆಯಿಂದ ಮೂವರು ಸಾವನ್ನಪ್ಪಿದ್ದರೆ, ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮುರುಗ ಅವರು ಇದೀಗ ತನ್ನ ಕಾಲು ಕಳೆದುಕೊಂಡಿದ್ದಾರೆ. ಉಳಿದಂತೆ ಗಾಯಾಳುಗಳು ಚೇತರಿಸಿಕೊಂಡಿದ್ದಾರೆ.