ಮಡಿಕೇರಿ, ಮೇ 12 : ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೊಡಗಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಸರಕಾರ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿನೇಶ್ ಗುಂಡೂರಾವ್ ಅವರು ಬಿಜೆಪಿ ಪ್ರಮುಖರೊಂದಿಗೆ ಸ್ನೇಹತನ ಹೊಂದಿರುವದರಿಂದ ಬಿಜೆಪಿ ಕೂಡ ಸಚಿವರ ತಪ್ಪುಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲವೆಂದು ಆರೋಪಿಸಿದರು. ಭಾರತೀಯ ಜನತಾ ಪಕ್ಷದೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಕೊಡಗಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಸರಕಾರ ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡಬೇಕೆ ಹೊರತು ಕೇವಲ ಕುಂಟು ನೆಪಗಳನ್ನು ನೀಡುವದು ಕೆಲಸವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಆದಿವಾಸಿಗಳ ಅತಂತ್ರ ಬದುಕು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ಕೊಡಗನ್ನು ಕಾಡುತ್ತಿದ್ದರೂ ಇವುಗಳಿಗೆ ಶಾಶ್ವತ ಪರಿಹಾರವನ್ನು ಸೂಚಿಸದೆ ಕೇವಲ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲೇ ಸಚಿವರು ಕಾಲ ಕಳೆಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುವ ಸರಕಾರದ ಪ್ರಕ್ರಿಯೆಯಾಗಿದೆ. ಆದರೆ ಉಸ್ತುವಾರಿ ಸಚಿವರಾದವರು ಆಯಾ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದಾಗಿ ಕೊಡಗು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ವಿರುದ್ಧ ವಿನಾಕಾರಣ ತಿರುಗಿ ಬೀಳುತ್ತಿದ್ದ ಬಿಜೆಪಿ, ಸಚಿವ ದಿನೇಶ್ ಗುಂಡೂರಾವ್ ಅವರ ವಿಚಾರದಲ್ಲಿ ಯಾಕೆ ಮೃದು ಧೋರಣೆ ತಾಳಿದೆ ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿ ಹಾಗೂ ಕುಟ್ಟಪ್ಪ ಸಾವಿನ ವಿಚಾರ ಬಿಟ್ಟರೆ ಜಿಲ್ಲೆಯ ಯಾವದೇ ಸಮಸ್ಯೆಗಳ ಬಗ್ಗೆ ಬಿಜೆಪಿ ಕಾಳಜಿ ತೋರುತ್ತಿಲ್ಲವೆಂದು ಸುಬ್ಬಯ್ಯ ಆರೋಪಿಸಿದರು.
ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಬಳಿಕ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನು ಆಡಳಿತ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಮಾಡಬೆÉೀಕು.
ಶಾಸಕರುಗಳು ಅಧ್ಯಕ್ಷ ಸ್ಥಾನ ಬಿಡಲಿ
ಆಯಾ ಕ್ಷೇತ್ರದ ಅಕ್ರಮ - ಸಕ್ರಮ ಸಮಿತಿಗಳಿಗೆ ಅಲ್ಲಿನ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಅದರಂತೆ ಕೊಡಗಿನ ಅಕ್ರಮ - ಸಕ್ರಮ ಸಮಿತಿಯಲ್ಲಿ ಬಿಜೆಪಿ ಶಾಸಕರು ಅಧ್ಯಕ್ಷರಾಗಿದ್ದರೆ, ಈ ಸಮಿತಿಗಳಿಗೆ ಸರಕಾರ ಕಾಂಗ್ರೆಸ್ ಸದಸ್ಯರನ್ನು ನೇಮಕ ಮಾಡಿದೆ. ಕಾಂಗ್ರೆಸ್ ಸದಸ್ಯರೊಂದಿಗೆ ಸಭೆ ಹೇಗೆಂದು ಶಾಸಕರು ಸಭೆಯನ್ನೇ ನಡೆಸಲು ಮುಂದಾಗಿಲ್ಲ, ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇವರ ಈ ನಡೆಗಳಿಂದ ಸಂಕಷ್ಟಕ್ಕೆ ಸಿಲುಕಿದವರು ಆದಿವಾಸಿಗಳು ಮತ್ತು ಜನಸಾಮಾನ್ಯರೇ ಎಂದು ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರೊಂದಿಗೆ ಸಭೆ ನಡೆಸಲು ಶಾಸಕರುಗಳಿಗೆ ಸಾಧ್ಯವಾಗದಿದ್ದಲ್ಲಿ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಿ ಎಂದು ಅವರು ಹೇಳಿದರು.