ಮಡಿಕೇರಿ, ಆ.3: ಮಾಜಿ ಸೈನಿಕರು, ಮಾಜಿ ಸೈನಿಕರ ವಿಧವಾ ಪತ್ನಿಯರು ಹಾಗೂ ಕುಟುಂಬಸ್ಥರ ಯೋಗಕ್ಷೇಮ ವಿಚಾರಣೆಗಾಗಿ, ಆರೋಗ್ಯ ತಪಾಸಣೆÉಗಾಗಿ ವಿಶೇಷ ರ್ಯಾಲಿ ತಾ.6 ರಂದು ನಗರದಲ್ಲಿ ನಡೆಯಲಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಅಯ್ಯಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ತಾ.6 ರಂದು ಹಿರಿಯ ಸೇನಾಧಿಕಾರಿಗಳು ಮಾಜಿ ಸೈನಿಕರು, ಮಾಜಿ ಸೈನಿಕರ ವಿಧವಾ ಪತ್ನಿಯರು ಹಾಗೂ ಕುಟುಂಬಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು. ಅನೇಕ ವರ್ಷಗಳ ನಂತರ ಕೊಡಗಿನಲ್ಲಿ ಮಹತ್ವದ ರ್ಯಾಲಿಯೊಂದು ನಡೆಯುತ್ತಿದ್ದು, ಸೇನಾ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವದು. ಅಲ್ಲದೆ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶವಿರುತ್ತದೆ. ಆರೋಗ್ಯ ತಪಾಸಣೆಗಾಗಿ ವಿಶೇಷ ವೈದ್ಯರ ತಂಡ ಆಗಮಿಸಲಿದೆ. ಉದ್ಯೋಗ ಮಾಹಿತಿ ಮತ್ತು ಸಲಹೆ ಸೂಚನೆಗಳಿಗಾಗಿ ಪ್ರತ್ಯೇಕ ಕೌಂಟರ್ ಗಳಿರುತ್ತವೆ. ಇತ್ತೀಚೆಗೆ ‘ವನ್ ರ್ಯಾಂಕ್ ವನ್ ಪೆನ್ಶನ್’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಬಗ್ಗೆ ಅನೇಕರಿಗೆ ಮಾಹಿತಿಯ ಕೊರತೆ ಇದೆ. ಆದ್ದರಿಂದ ಯೋಜನೆಯ ಸಂಪೂರ್ಣ ಸೌಲಭ್ಯಗಳ ಕುರಿತು ಸಭೆಯಲ್ಲಿ ಮನ ವರಿಕೆ ಮಾಡಿಕೊಡ ಲಾಗುವದೆಂದು ಬಿ.ಎಂ. ಅಯ್ಯಪ್ಪ ತಿಳಿಸಿದರು. ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದಿರುವ ಮಾಜಿ ಸೈನಿಕರ ಕುಟುಂಬಕ್ಕೆ ಧನ ಸಹಾಯ ಮಾಡಲಾಗುವದು. ಜಿಲ್ಲೆಯಲ್ಲಿ ಸುಮಾರು 6,600 ಮಂದಿ ಮಾಜಿ ಯೋಧರಿದ್ದು, 1800 ಮಂದಿ ಮಾಜಿ ಯೋಧರ ವಿಧವಾ ಪತ್ನಿಯರಿದ್ದಾರೆ. ಈ ರ್ಯಾಲಿಯಲ್ಲಿ ಸುಮಾರು 1000 ದಿಂದ 1300 ಮಂದಿ ಪಾಲ್ಗೊಳ್ಳಬಹುದೆಂದು ಲೆ|ಕ| ಬಿ.ಎಂ. ಅಯ್ಯಪ್ಪ ಹೇಳಿದರು.

ಕೊಡಗು ಜಿಲ್ಲೆ ಸೇನಾಕ್ಷೇತ್ರಕ್ಕೆ ವೀರ ಸೇನಾನಿಗಳಾದ ಫೀ|ಮಾ|ಕೆ.ಎಂ. ಕಾರ್ಯಪ್ಪ ಹಾಗೂ ಜ| ತಿಮ್ಮಯ್ಯ ಸೇರಿದಂತೆ ಅನೇಕ ಯೋಧರನ್ನು ಕೊಡುಗೆಯಾಗಿ ನೀಡಿರುವದರಿಂದ ನಗರದಲ್ಲಿ ಹಿರಿಯ ಸೇನಾಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಈ ರ್ಯಾಲಿ ಮಹತ್ವವನ್ನು ಪಡೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾ.6 ರಂದು ಬೆಳಗ್ಗೆ 9 ಗಂಟೆಯಿಂದ 10.30 ರವರೆಗೆ ನೋಂದಣಿ ಕಾರ್ಯ ನಡೆಯಲಿದೆ. 11 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿರಿಯ ಸೇನಾಧಿಕಾರಿಗಳು ಸಂವಾದದಲ್ಲಿ ಪಾಲ್ಗೊಳ್ಳುವದಲ್ಲದೆ ಅಮೂಲ್ಯ ಮಾಹಿತಿಗಳನ್ನು ನೀಡಲಿದ್ದಾರೆ.