ವೀರಾಜಪೇಟೆ, ಆ. 25: ಜಿಲ್ಲೆಯ ದೊಡ್ಡ ಧರ್ಮ ಕೇಂದ್ರವಾಗಿರುವ ಪಟ್ಟಣದ ಸಂತ ಅನ್ನಮ್ಮ ಧರ್ಮ ಕೇಂದ್ರದ 46ನೇ ಮುಖ್ಯ ಧರ್ಮ ಗುರುಗಳಾಗಿ ರೆ.ಫಾ. ಮದಲೈ ಮುತ್ತು ಅಧಿಕಾರ ಸ್ವೀಕರಿಸಿದರು. ಪಟ್ಟಣದ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಡಿಕೇರಿಯ ಸಂತ ಮೈಕಲ್ ದೇವಾಲಯ ಧರ್ಮ ಗುರುಗಳಾದ ಆಫ್ರೆಡ್ ಜಾನ್ ಮೆಂಡೋಝ, ಮೈಸೂರು ಧರ್ಮ ಕ್ಷೇತ್ರದ ಪ್ರತಿನಿಧಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭ ದೇವಾಲಯದ ಸಹಾಯಕ ಗುರುಗಳಾದ ರೆ.ಫಾ. ಟೆನ್ನಿ ಕುರಿಯನ್, ರೆ.ಫಾ. ಬಾಲರಾಜ್ ಸೇರಿದಂತೆ ಭಕ್ತರು ಹಾಜರಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು.

ಈ ಹಿಂದಿನ ಮುಖ್ಯ ಧರ್ಮ ಗುರುಗಳಾದ ರೆ.ಫಾ. ಆರೋಗ್ಯ ಸ್ವಾಮಿ ಅವರು ಅಧಿಕಾರ ಹಸ್ತಾಂತರಿಸಿದರು. ಮೈಸೂರು ಕೇಂದ್ರದ ಅಧೀನದಲ್ಲಿ ಬರುವ ಸಂತ ಅನ್ನಮ್ಮ ಕೇಂದ್ರ ಜಿಲ್ಲೆಯ ದೊಡ್ಡ ಕೇಂದ್ರವಾಗಿದೆ. 1792 ರಲ್ಲಿ ಸ್ಥಾಪಿತಗೊಂಡಿರುವ ಈ ದೇವಾಲಯದ ವ್ಯಾಪ್ತಿಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಸುಮಾರು 500 ಕುಟುಂಬಗಳಿವೆ. ಸಂತ ಅನ್ನಮ್ಮ ಕೇಂದ್ರದ ಸಂತ ಅನ್ನಮ್ಮ ದೇವಾಲಯ ವಿವಿಧ ಹಂತಗಳ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಇಂದು ಸುಮಾರು 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನಾರ್ಜನೆ ಪಡೆಯುತ್ತಿದ್ದಾರೆ.