ನಾಪೋಕ್ಲು, ಜೂ. 17: ನಾಪೋಕ್ಲು ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಸಂಪೂರ್ಣ ಪ್ರದೇಶ ಗಳನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮುಕ್ತ ಪ್ರದೇಶವನ್ನಾಗಿಸಲು ಯೋಜನೆಗಳನ್ನು ರೂಪಿಸಲಾಗುವದು ಎಂದು ನಾಪೋಕ್ಲು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದ್ದಾರೆ.

ಕಾವೇರಿ ಬಚಾವೋ ಆಂದೋಲನದ ಪಾದಯಾತ್ರೆ ತಂಡವನ್ನು ನಾಪೋಕ್ಲು ಹಳೆ ತಾಲೂಕು ಭಗವತಿ ದೇವಾಲಯದ ಬಳಿ ಬರಮಾಡಿಕೊಂಡ ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಪೋಕ್ಲು ಸೇರಿದಂತೆ ಜಿಲ್ಲೆಯ ನದಿ ತಟಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಅವರು, ಸದ್ಯದಲ್ಲೇ ನಾಪೋಕ್ಲು ಗ್ರಾಮದಲ್ಲಿ ಪಂಚಾಯಿತಿ ಗಳು ಒಳಗೊಂಡಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಯೋಜನೆ ರೂಪಿಸ ಲಾಗುವದು ಎಂದು ತಿಳಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಜಿಲ್ಲಾ ಪಂಚಾಯಿತಿ ಮೂಲಕ ಸಂಪೂರ್ಣ ನೆರವು ಒದಗಿಸುವದರೊಂದಿಗೆ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಕಾರ್ಯಸೂಚಿ ಹಮ್ಮಿಕೊಳ್ಳ ಲಾಗುವದೆಂದು ತಿಳಿಸಿದರು.

ಇದೇ ಸಂದರ್ಭ ಪಾದಯತ್ರೆ ತಂಡದೊಂದಿಗೆ ಕೊಟ್ಟಮುಡಿ ಸೇತುವೆ ಬಳಿಗೆ ಭೇಟಿ ನೀಡಿದ ಮುರಳಿ ಅವರು ನದಿ ತಟದಲ್ಲಿ ಕಸ ತ್ಯಾಜ್ಯ ಸುರಿದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತಕ್ಷಣ ಸಂಬಂಧಿಸಿದ ಇಲಾಖೆಗಳು ನದಿ ತಟಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಹಳೆ ತಾಲೂಕು ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ, ಕಾರ್ಯದರ್ಶಿ ಅರೆಯಡ ಸೋಮಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಳ್ಳಮ್ಮ ನಾಣಯ್ಯ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಪ್ರಮುಖರಾದ ಅಂಬಿ ಕಾರ್ಯಪ್ಪ, ಸುಧಿ ತಿಮ್ಮಯ್ಯ, ಪಿ.ಕೆ. ಸುಗುಣ, ಉಷಾ, ಪಿ. ಜಮುನಾ ಮುರಳಿ, ಎನ್.ಯು. ಕಸ್ತೂರಿ, ಮನು ಮಹೇಶ್, ಕೆ.ಎಂ. ಪೂವಪ್ಪ ಮತ್ತಿತರರು ಇದ್ದರು.

ಪಾದಯಾತ್ರೆ ತಂಡ ನಾಪೋಕ್ಲು ಪಟ್ಟಣದ ಮೂಲಕ ಹೊದ್ದೂರು ಮಾರ್ಗವಾಗಿ ಮೂರ್ನಾಡುವಿನಿಂದ ಕೊಂಡಂಗೇರಿಯತ್ತ ತೆರಳಿತು. ಈ ನಡುವೆ ಹೊದ್ದೂರು ಗ್ರಾಮದಲ್ಲಿ ಭಗವತಿ ದೇವಾಲಯದ ಅಧ್ಯಕ್ಷ ನೆರವಂಡ ಕೆ. ನಂಜಪ್ಪ ಅವರ ನೇತೃತ್ವದಲ್ಲಿ ಅಲ್ಲಿನ ಪ್ರಮುಖರು ತಂಡವನ್ನು ಬರಮಾಡಿಕೊಂಡು ಬೀಳ್ಕೊಟ್ಟರು. ಪಾದಯಾತ್ರೆ ತಂಡ ಕೊಂಡಂಗೇರಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿತ್ತು. 4ನೇ ದಿನವಾದ ತಾ. 18 ರಂದು (ಇಂದು) ಪಾದಯಾತ್ರೆ ತಂಡ ಕೊಂಡಂಗೇರಿಯಿಂದ ಕಟ್ಟೆಮಾಡು ಮಾರ್ಗವಾಗಿ ನೆಲ್ಲಿಹುದಿಕೇರಿ ತಲಪಲಿದೆ.