ಮಡಿಕೇರಿ, ಅ. 1: ಟಾಟಾ ಕಾಫಿ ಲಿಮಿಟೆಡ್, ದ ಕೂರ್ಗ್ ಫೌಂಡೇಷನ್, ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸೆಬಲಿಟಿ (ಎ.ಪಿ.ಡಿ) ಮತ್ತು ಸ್ವಸ್ಥ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ಸ್ವಸ್ಥ ಸಮುದಾಯ ಆಧಾರಿತ ಪುನರ್ವಸತಿ (ಸಿ.ಬಿ.ಆರ್) ಕಾರ್ಯಕ್ರಮದ ವತಿಯಿಂದ ಬಡ ವಿಕಲಚೇತನರಿಗೆ ಉಚಿತ ಸಾಧನ-ಸಲಕರಣೆಗಳ ವಿತರಣಾ ಸಮಾರಂಭ ನೆರವೇರಿತು.

ಕಾರ್ಯಕ್ರಮದಲ್ಲಿ 14 ವಿಕಲಚೇತನರಿಗೆ ಗಾಲಿ ಕುರ್ಚಿ, 7 ವಿಕಲಚೇತನರಿಗೆ ಕೃತಕ ಕಾಲು, 3 ವಿಕಲಚೇತನರಿಗೆ ವಾಕರ್, 5 ವಿಕಲಚೇತನರಿಗೆ ಊರುಗೋಲು, 15 ವಿಕಲಚೇತನರಿಗೆ ಎತ್ತರದ ಶೂ, ರೊಲೇಟರ್, ಸೊಂಟದ ಬೆಲ್ಟ್, ಗೇಟರ್ಸ್, ಕ್ಯಾಲಿಪರ್ಸ್ ಹೀಗೆ ಒಟ್ಟು 44 ವಿಕಲಚೇತನರಿಗೆ ರೂ. 35 ಲಕ್ಷ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮೀ ರಾಮಚಂದ್ರ ನೇರವೇರಿಸಿ ಮಾತನಾಡಿ, ಸ್ವಸ್ಥ ಸಂಸ್ಥೆಯು ಸಮುದಾ ಯಗಳಿಗೆ ತೆರಳಿ ವಿಕಲಚೇತನರನ್ನು ಗುರುತಿಸಿ ಉಚಿತವಾಗಿ ಸಾಧನ-ಸಲಕರಣೆಗಳನ್ನು ನೀಡುತ್ತಿರುವದು ಉತ್ತಮವಾದ ಕೆಲಸ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಮಾತನಾಡಿ, ವಿಕಲಚೇತನರು ಸಾಧನ-ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ವಸ್ಥ ಸಂಸ್ಥೆ ಯಾವದೇ ಸಹಾಯವನ್ನು ಬಯಸಿದರೂ ಸಹಾಯ ಹಸ್ತವನ್ನು ನೀಡುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಸ್ಥ ಸಂಸ್ಥೆಯ ಉಪ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ. 2020 ರೊಳಗೆ ಕೊಡಗಿನ ಎಲ್ಲಾ ವಿಕಲಚೇತನರಿಗೂ ಸರ್ಕಾರದಿಂದ ಸಿಗಬೇಕಿರುವ ಮೂಲಸೌಕರ್ಯ ಹಾಗೂ ಸರ್ಕಾರದ ಸಾಮಾಜಿಕ ಭದ್ರತೆಗಳನ್ನು ತಲಪಿಸಿ ಎಲ್ಲಾ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸ್ವಸ್ಥ ಸಂಸ್ಥೆ ವತಿಯಿಂದ ಸಮುದಾಯ ಆಧಾರಿತ ಪುನರ್ ವಸತಿ ಕಾರ್ಯಕ್ರಮವನ್ನು ರೂಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ವಿಕಲ ಚೇತನರಿಗೆ ಸಹಾಯ ಮಾಡಲು ಸರ್ವರೂ ಕೈ ಜೋಡಿಸಬೇಕೆಂದು ಹೇಳಿದರು.

ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಮುಮ್ತಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೀಕ್ಷಕಿ ಶಾರದ ರಾಮನ್, ರೋಟರಿ ಮಿಸ್ಟಿ ಹಿಲ್ಸ್‍ನ ಸಮುದಾಯ ನಿರ್ದೇಶಕಿ ಶಶಿ ಮೊಣ್ಣಪ್ಪ, ಬೆಂಗಳೂರು ಎ.ಡಿ.ಪಿ. ಸಂಸ್ಥೆಯ ಸಂಯೋಜಕ ನರಸಿಂಹ ಮೂರ್ತಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ಎನ್.ಎಂ. ಜಗದೀಶ್, ಶಾರದ ರಾಮನ್ ಮತ್ತು ನರಸಿಂಹ ಮೂರ್ತಿ ಹಾಗೂ ಎ.ಪಿ.ಡಿ. ತಂಡ ಕಾರ್ಯಕ್ರಮ ಸಂಯೋಜಕರು, ಕಾರ್ಯಕ್ರಮದಲ್ಲಿ ಸಾಧನ-ಸಲಕರಣೆಗಳ ಜೋಡಣೆ ಹಾಗೂ ಸಹಾಯ ಹಸ್ತವನ್ನು ನೀಡಿದ ಬೆಂಗಳೂರಿನ ಎ.ಪಿ.ಡಿ. ಸಂಸ್ಥೆಯ ಸಿಬ್ಬಂದಿಗಳಾದ ನರಸಿಂಹಮೂರ್ತಿ, ಸೆಲ್ವಂ, ಅರುಳ್, ವಿನ್ಸೆಂಟ್, ಕುಮಾರ್ ಅವರುಗಳನ್ನು ಸ್ವಸ್ಥ ಸಂಸ್ಥೆಯ ವತಿಯಿಂದ ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಸ್ವಸ್ಥ ಸಂಸ್ಥೆಯ ಸಿ.ಬಿ.ಆರ್. ಸಿಬಬಂದಿ ಗಳಾದ ಮುರುಗೇಶ, ರಾಜು, ಬೇಬಿ ಹಾಗೂ ಎಫ್.ಎಂ.ಕೆ.ಸಿ. ಕಾಲೇಜಿನ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ಪವಿತ್ರ ಕಾರ್ಯಕ್ರಮ ನಿರೂಪಿಸಿ, ಲತಾ ಸ್ವಾಗತಿಸಿದರೆ, ರೇಖಾ ವಂದಿಸಿದರು.