ಸೋಮವಾರಪೇಟೆ, ಆ.6: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಸಿದ ಪ್ರತಿಭಟನೆಯನ್ನು ಶವಯಾತ್ರೆಗೆ ಹೋಲಿಸಿರುವ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರ ಹೇಳಿಕೆಯನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾಧ್ಯಕ್ಷರು ಇಂತಹ ಕೀಳುಮಟ್ಟದ ಹೇಳಿಕೆ ನೀಡುವದು ಖಂಡನೀಯ. ಮನು ಮುತ್ತಪ್ಪ ಅವರ ಹಿನ್ನೆಲೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮನು ಮುತ್ತಪ್ಪ ಅವರ ದಬ್ಬಾಳಿಕೆ ಏನಿದ್ದರೂ ಬಿಜೆಪಿಗೆ ಸೀಮಿತಗೊಳ್ಳಬೇಕು. ಕಾಂಗ್ರೆಸ್ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದರೆ ತಕ್ಕ ಉತ್ತರ ನೀಡಲು ಪಕ್ಷ ಬದ್ಧವಿದೆ ಎಂದರು.

ಬಿಜೆಪಿಯಲ್ಲಿರುವ ಆಂತರಿಕ ಕಚ್ಚಾಟಗಳ ಬಗ್ಗೆ ಮನು ಮುತ್ತಪ್ಪ ಮೊದಲು ಗಮನಹರಿಸಲಿ. ಕಾಂಗ್ರೆಸ್ ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಮಣಿಸುವ ಶಕ್ತಿ ಹೊಂದಿದೆ. ಮನು ಮುತ್ತಪ್ಪ ಅವರು ಇಂತಹ ಅಸಂಬದ್ಧ ಹೇಳಿಕೆ ಗಳನ್ನು ನಿಲ್ಲಿಸದಿದ್ದರೆ ಅವರ ವೈಯಕ್ತಿಕ ವಿಚಾರಗಳನ್ನೂ ಸಮಾಜಕ್ಕೆ ಹೇಳಬೇಕಾಗುತ್ತದೆ ಎಂದರು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾದ್ದರಿಂದ ದೇಶದಲ್ಲೂ ಬೆಲೆ ಇಳಿಕೆಯಾಗಿದೆ. ಇದನ್ನೇ ಬಿಜೆಪಿಗರು ತಮ್ಮ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿ ದ್ದಾರೆ. ಬೆಲೆ ಇಳಿಕೆಯಿಂದ ಒಂದು ಲೀಟರ್ ಪೆಟ್ರೋಲ್ ಬೆಲೆಯನ್ನು 30 ರೂ.ಗೆ ಇಳಿಸಬಹುದು. ಇದಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ ನೋಡೋಣ ಎಂದು ಸವಾಲು ಹಾಕಿದರು.

ತಾ. 7ರಂದು ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷವನ್ನು ಕೊಡಗಿನಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವದು ಎಂದು ಕೆ.ಎಂ. ಲೋಕೇಶ್ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್, ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಯುವ ಕಾಂಗ್ರೆಸ್‍ನ ಸುನಿಲ್ ಉಪಸ್ಥಿತರಿದ್ದರು.