ಮಡಿಕೇರಿ,ಜು.6: ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಆಗಾಗ ಬಿರುಸಿನ ಮಳೆಯಾಗುತ್ತಿದೆ. ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವದರಿಂದ ನೀರಿನ ಹರಿವು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಜೂನ್ ಅಂತ್ಯದವರೆಗೆ 114 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 36.81 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 96 ಮನೆಗಳು ಹಾನಿಯಾಗಿದ್ದು, ಸುಮಾರು 33.48 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. 93 ಮನೆಗಳ ಕುಟುಂಬಗಳಿಗೆ ಒಟ್ಟು 10.86 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. (ಮೊದಲ ಪುಟದಿಂದ) 3 ಮನೆಗಳಿಗೆ ಪರಿಹಾರ ವಿತರಿಸಲು ಬಾಕಿ ಇದೆ.

ಸೋಮವಾರಪೇಟೆ ತಾಲೂಕಿನಲ್ಲಿ 13 ಮನೆಗಳು ಹಾನಿಯಾಗಿದ್ದು, 1.33 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದ್ದು, 13 ಮನೆಗಳ ಕುಟುಂಬಗಳಿಗೆ ಒಟ್ಟು 1.33 ಲಕ್ಷ ಪರಿಹಾರ ವಿತರಿಸಲಾಗಿದೆ. ವೀರಾಜಪೇಟೆ ತಾಲೂಕಿನ 5 ಮನೆಗಳು ಭಾಗಶಃ ಹಾನಿಯಾಗಿದ್ದು, 2 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 5 ಮನೆಗಳ ಕುಟುಂಬಗಳಿಗೆ ಒಟ್ಟು 1.02 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಒಟ್ಟಾರೆ ಮನೆ ಹಾನಿ ಸಂಬಂಧ 111 ಕುಟುಂಬಗಳಿಗೆ ಸುಮಾರು ಒಟ್ಟು 13.21 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಸಿಡಿಲಿಗೆ ತುತ್ತಾಗಿ ಒಂದು ಮಾನವ ಪ್ರಾಣ ಹಾನಿಯಾಗಿದ್ದು, ಅವರ ಕುಟುಂಬದವರಿಗೆ ಅನುಕಂಪ ಭತ್ಯೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಮೂರು ತಾಲೂಕಿನಲ್ಲಿ ತಲಾ 1 ಜಾನುವಾರು ಮೃತಪಟ್ಟಿದ್ದು, 82 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಎರಡು ಜಾನುವಾರು ಕುಟುಂಬಗಳಿಗೆ 52 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಒಂದು ಜಾನುವಾರು ಕುಟುಂಬಕ್ಕೆ ಪರಿಹಾರ ವಿತರಿಸಲು ಬಾಕಿ ಇದೆ.