ಕುಶಾಲನಗರ, ಸೆ. 18: ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದರೂ ದುರಸ್ತಿ ಪಡಿಸುವ ಸಂಬಂಧ ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಬರುವ ಗ್ರಾಮೀಣ ರಸ್ತೆಗಳು ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಉಸ್ತುವಾರಿ ಸಚಿವರು ಸೂಚಿಸಿದ್ದರೂ ಲೋಕೋಪಯೋಗಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಘೋಷಿಸಿರುವ ರೂ. 50 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಬಳಸದೇ ತಮಗಿಷ್ಟ ಬಂದಂತೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ನಡಾವಳಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದು, ರಸ್ತೆಗಳ ದುರಸ್ತಿಗಾಗಿ ಆಯವ್ಯಯ ಭಾಷಣದಲ್ಲಿ ಮೀಸಲಿರಿಸಿದ ರೂ. 50 ಕೋಟಿಯನ್ನು ಅನುದಾನದ ಹಂಚಿಕೆ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ಪಡೆದು ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲು ತೀರ್ಮಾನಿಸಲಾಗಿತ್ತು.
ಇದರೊಂದಿಗೆ ಜಿಲ್ಲೆಯಿಂದ ಕಾಂಗ್ರೆಸ್ ಪ್ರಮುಖರ ನಿಯೋಗ ಕೂಡ ಬೆಂಗಳೂರಿಗೆ ತೆರಳಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಲಾಗಿತ್ತು ಎಂದು ಚಂದ್ರಕಲಾ ತಿಳಿಸಿದ್ದಾರೆ. ಆದರೆ ಕೊಡಗು ಜಿಲ್ಲಾ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಈ ಅನುದಾನವನ್ನು ತಮಗಿಷ್ಟ ಬಂದಂತೆ ಮಂಜೂರು ಮಾಡಿಸಿಕೊಂಡಿರುವದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ಮುಖ್ಯಮಂತ್ರಿಗಳಿಗೂ ಅಧಿಕಾರಿಗಳ ಮೇಲೆ ದೂರು ನೀಡಲಾಗಿದೆ ಎಂದು ಚಂದ್ರಕಲಾ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮೀಣ ರಸ್ತೆಗಳ ದುರಸ್ತಿ ಕಾಣಬೇಕಾಗಿದ್ದು, ಕಳೆದ ಬಾರಿ ಕೂಡ ಈ ಕಾಮಗಾರಿ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.