ಸೋಮವಾರಪೇಟೆ, ಸೆ. 18: ಶಿಕ್ಷಣ ಪಡೆಯುವ ಸಮಯದಲ್ಲಿಯೇ ವಿದ್ಯಾರ್ಥಿಗಳು ತಮ್ಮಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಮಹೇಶ್ ಹೇಳಿದರು.

ಇಲ್ಲಿನ ಸಂತ ಜೋಸೆಫರ ಶಿಕ್ಷಣಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆ ನೇತೃತ್ವದಲ್ಲಿ ಸಂತ ಜೋಸೆಫರ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂಗವಿಕಲರಿಗೆ ಪರಿಕರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಸ್ಥ ಸಂಸ್ಥೆಯ ವಿಶೇಷ ಶಿಕ್ಷಕ ಉಮೇಶ್ ಮಾತನಾಡಿ, ಕಳೆದ 13 ವರ್ಷಗಳಿಂದ ಸ್ವಸ್ಥ ಸಂಸ್ಥೆಯು ಜಿಲ್ಲೆಯಲ್ಲಿ ಎರಡು ಕೇಂದ್ರಗಳನ್ನು ತೆರೆಯುವ ಮೂಲಕ ಅಂಗವಿಕಲ ಮಕ್ಕಳ ಪುನಶ್ಚೇತನಕ್ಕೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

ಇದೇ ಸಂದರ್ಭ ಐದು ಮಂದಿಗೆ ಲಯನ್ಸ್ ಸಂಸ್ಥೆಯ ಮೂಲಕ ಗಾಲಿ ಕುರ್ಚಿ ಹಾಗೂ ಊರುಗೋಲುಗಳನ್ನು ಸಂಸ್ಥೆಯ ಸದಸ್ಯ ಜಗದೀಶ್ ವಿತರಿಸಿದರು. ಸ್ವಸ್ಥ ಸಂಸ್ಥೆಯ ಶಿಕ್ಷಕರುಗಳಾದ ಶೀತಲ್, ಉಮೇಶ್, ಧರಣಿ, ಮಂಜುಳ, ಮುರುಗೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ಸ್ವಸ್ಥ ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಲೀಲಾರಾಂ, ಸೋಮವಾರಪೇಟೆ ಸಮಿತಿಯ ಕಾರ್ಯದರ್ಶಿ ಮಂಜುನಾಥ ಚೌಟ, ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್ ಮತ್ತಿತರರು ಉಪಸ್ಥಿತರಿದ್ದರು.