ಮಡಿಕೇರಿ, ಸೆ. 30: ವೀರ್ ಜವಾನೋ ಆಗೇ ಬಡೋ.., ಹಮ್ ತುಮ್ಹಾರ ಸಾಥ್ ಹೈ.., ಭಾರತ್ ಮಾತಾ ಕೀ ಜೈ.., ವಂದೇ ಮಾತರಂ..., ಘೋಷಣೆಯೊಂದಿಗೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ದೇಶಾಭಿಮಾನಿಗಳು ಪಕ್ಷ - ಮತ, ಬೇಧ ಮರೆತು ‘ಉರಿ’ ಧಾಳಿಯ ಹಿನ್ನೆಲೆಯಲ್ಲಿ ನಡೆದ ಪ್ರತೀಕಾರಕ್ಕಾಗಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಭಾರತದ ತಾಳ್ಮೆಯನ್ನೇ ದೌರ್ಬಲ್ಯವೆಂದೆಣಿಸಿ ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿರುವ ಭಾರತೀಯ ಸೇನೆ ಬುಧವಾರ ಮಧ್ಯರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಕ್ಕೆ ನುಗ್ಗಿ 7 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಜೊತೆಯಲ್ಲೇ 40ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ವೀರ ಸೈನಿಕರು ಹಾಗೂ ಕೇಂದ್ರ ಸರ್ಕಾರದ ದಿಟ್ಟ ನಿಲುವನ್ನು ಪ್ರಶಂಸಿಸಿ ವಿಜಯೋತ್ಸವ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆಗೈದು ವಿವಿಧ ರಾಜಕೀಯ ಪಕ್ಷಗಳ ಹಾಗೂ ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು ವೀರ ಸೈನಿಕರ ಗುಣಗಾನ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಚಿ.ನಾ. ಸೋಮೇಶ್ ಮಾತನಾಡಿ, ಇತ್ತೀಚೆಗೆ ‘ಉರಿ’ಯಲ್ಲಿ ಉಗ್ರರು ದೇಶದ 19ಮಂದಿ ಯೋಧರನ್ನು ಬಲಿ ಪಡೆದುಕೊಂಡಾಗಲೇ ತಕ್ಕ ಪ್ರತ್ಯುತ್ತರ ನೀಡುವದಾಗಿ ಪ್ರಧಾನಿ ಅವರು ಹೇಳಿಕೆ ನೀಡಿದ್ದರು. ನಿನ್ನೆಯ ಕಾರ್ಯಾಚರಣೆಯಿಂದ ಸಾರ್ಥಕತೆ ಕಂಡಿದೆ. ಜಗತ್ತು ಅಚ್ಚರಿ ಪಡುವಂತಹ ಕಾರ್ಯಾಚರಣೆ ಇದಾಗಿದೆ. ಪಾಕಿಸ್ತಾನಕ್ಕೆ ಎಂದೂ ಮರೆಯ ಲಾಗದ ಸಂದೇಶ ರವಾನೆಯಾಗಿದೆ. ಪ್ರತೀಕಾರದ ಸನ್ನಿವೇಶ ಎದುರಾದಾಗ ದೇಶದ ಜನತೆ ಎದ್ದು ನಿಲ್ಲಬೇಕಾಗಿದೆ. ವೀರ ಸೈನಿಕರೊಂದಿಗೆ ಕೊಡಗಿನ ಜನತೆಯೂ ಸದಾ ಇರುತ್ತಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಗೌರವ ಕಾರ್ಯದರ್ಶಿ ಹಾಗೂ ಬ್ಯಾರಿ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಬಿ.ಎ. ಷಂಶುದ್ದೀನ್ ಮಾತನಾಡಿ, ಪಾಕ್ ಉಗ್ರರಿಗೆ ನೆರವು ನೀಡುತ್ತಾ ಬಂದಿದ್ದರೂ ಜಗತ್ತಿನೆದುರು ನಿರಾಕರಿಸುತ್ತಾ ಬರುತ್ತಿತ್ತು. ಇದೀಗ ಭಾರತದ ವೀರ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿರುವದರಿಂದ ಪಾಕಿಸ್ತಾನದ ಹಸ್ತಕ್ಷೇಪ ಜಗಜ್ಜಾಹೀರಾಗಿದೆ. ಉಗ್ರವಾದದಿಂದ ಪಾಕಿಗೂ ನಷ್ಟವಾಗಿದೆ. ಸರ್ಜಿಕಲ್ ಕಾರ್ಯಾಚರಣೆಯಿಂದ ಪಾಕ್ ಸೈನ್ಯ ತಲೆತಗ್ಗಿಸುವಂತಾಗಿದೆ. ಯುದ್ಧದ ಸಾಧ್ಯತೆ ಹೆಚ್ಚಿದೆ.