ಗೋಣಿಕೊಪ್ಪಲು, ಜು. 2: ಕುಗ್ರಾಮಗಳಿಗೆ ಶಾಲಾ ವಾಹನಗಳು ಬಾರದ ಕಾರಣ ಪ್ರಾದೇಶಿಕ ಸಾರಿಗೆ ಇಲಾಖೆ ನಿಯಮದಲ್ಲಿ ಸಡಿಲಿಕೆ ಮಾಡಬೇಕೆಂದು ದಕ್ಷಿಣ ಕೊಡಗಿನ ಪೋಷಕರು ಒತ್ತಾಯಿಸಿದ್ದಾರೆ.

ದಕ್ಷಿಣ ಕೊಡಗಿನ ಕುಗ್ರಾಮಗಳಿಂದ ಖಾಸಗಿ ವಾಹನಗಳು ಮಕ್ಕಳನ್ನು ಕರೆತರುವದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿದೆ ಎಂದು ಸೀಗೆತೋಡು ಗ್ರಾಮದ ಪೋಷಕ ಜ್ಯೋತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದಿನನಿತ್ಯ ಕಾಡಾನೆಗಳಿಂದ ಜೀವಭಯದಲ್ಲಿರುವ ನಮ್ಮ ಮಕ್ಕಳನ್ನು ಖಾಸಗಿ ವಾಹನದವರು ಜೀವದ ಹಂಗು ತೊರೆದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ನಮ್ಮ ಮಕ್ಕಳು ಶೀಕ್ಷಣ ಪಡೆಯುವಂತಾಗಿದೆ. ಆದರೆ ಆರ್‍ಟಿಓ ಇಲಾಖೆ ಅಧಿಕಾರಿಗಳು ಖಾಸಗಿ ವಾಹನ ಚಾಲಕರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಶಿಕ್ಷಣಕ್ಕೆ ತೊಡಕಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪೋಷಕ ಕೃಷ್ಣೇಗೌಡ ಮಾತನಾಡಿ, ವಾಹನ ಚಾಲಕರು ತಮ್ಮ ಮಕ್ಕಳಂತೆ ಇತರರ ಮಕ್ಕಳನ್ನು ಕರೆದುಕೊಂಡು ಹೋಗಿ ಸುರಕ್ಷತೆ ಕಾಪಾಡುತ್ತಿದ್ದಾರೆ ಎಂದರು. ದೀಪಾ ಮಾತನಾಡಿ, ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಚಾಲಕರು ಸ್ವಉದ್ಯೋಗ ಮಾಡಿಕೊಂಡಿದ್ದಾರೆ. ಸಿಗುವ ಅಲ್ಪ ಲಾಭದಲ್ಲಿ ಜೀವನ ಸಾಗಿಸುವಂತಾಗಿದೆ. ನಿಯಮ ಸಡಿಲಿಕೆ ಮಾಡುವ ಮೂಲಕ ಅವರ ಉದ್ಯೋಗಕ್ಕೆ ಪೆಟ್ಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಪೋಷಕರುಗಳಾದ ಕೊಟ್ಟಂಗಡ ಪ್ರಕಾಶ್, ಯೋಗೇಶ್ ಕುಮಾರ್ ಉಪಸ್ಥಿತರಿದ್ದರು.