ಕುಶಾಲನಗರ, ನ. 20: ಮಹಿಳೆಯರು ಸಾಲದ ಬಾಧೆಗೆ ತುತ್ತಾಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಕೊಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಂದ್ರ ಕಿವಿಮಾತು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಹೈನುಗಾರಿಕೆ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊಪ್ಪ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವದರ ಮೂಲಕ ಸಮಾಜದ ಮುಖ್ಯವಾಹಿನಿ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಕೊಪ್ಪ ಗ್ರಾಮದಲ್ಲಿ ನೂತನ ಹಾಲಿನ ಡೈರಿ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗು ವದೆಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪಿರಿಯಾಪಟ್ಟಣ ಭಾಗದ ಯೋಜನಾಧಿಕಾರಿ ರಮೇಶ್ ಮಾತನಾಡಿ, ಯೋಜನೆಯ ಮೂಲಕ ಕಲ್ಪಿಸಿರುವ ವಿವಿಧ ಸೌಲಭ್ಯಗಳ ಸದುಪಯೋಗ ಪಡೆಯುವ ಮೂಲಕ ಸ್ವ ಉದ್ಯೋಗ ಕಲ್ಪಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದಲ್ಲಿ ಯೋಜನೆಯ ಉದ್ದೇಶ ಸಫಲವಾಗಲಿದೆ ಎಂದರು.

ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಮಹಿಳೆಯರು ಯಾವದೇ ಆಸೆ-ಆಮಿಷಗಳಿಗೆ ಬಲಿಯಾಗಬಾರದು. ಪ್ರಸಕ್ತ ಐನೂರು ಮತ್ತು ಸಾವಿರ ರೂಪಾಯಿಗಳ ನೋಟು ಬದಲಾವಣೆ ಸಂದರ್ಭ ಕಾಳಧನಿಕರ ಜಾಲಕ್ಕೆ ಸಿಲುಕದಂತೆ ಎಚ್ಚರವಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ಹೈನುರಾಸುಗಳ ನಿರ್ವಹಣೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ವಿಷಯ ತಜ್ಞರಾದ ಡಾ. ರವಿಕುಮಾರ್, ಬರ ಪರಿಸ್ಥಿತಿಯಲ್ಲಿ ಮೇವಿನ ನಿರ್ವಹಣೆಯ ಬಗ್ಗೆ ಮೈಸೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಎಲ್.ಆರ್. ಕರಿಬಸವರಾಜು ಮಾಹಿತಿ ನೀಡಿದರು.

ಸ್ಥಳೀಯ ಪ್ರಗತಿಪರ ಕೃಷಿಕ ಬಸವಣ್ಣ ಅಧ್ಯಕ್ಷೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪ್ರಗತಿಪರ ಹೈನುಗಾರರಾದ ಯಶವಂತಕುಮಾರ್, ಮಂಜುನಾಥ್ ಹೈನುಗಾರಿಕೆ ಬಗ್ಗೆ ಅನುಭವ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ಎಸ್. ನಿಶ್ಚಿತ್, ಯೋಜನೆಯ ಕೃಷಿ ಮೇಲ್ವಿಚಾರಕ ಶ್ರೀನಿವಾಸ್, ಕೊಪ್ಪ ವಲಯದ ಮೇಲ್ವಿಚಾರಕ ವೈ.ಕೆ. ಉಮೇಶ್ ಮತ್ತು ಸೇವಾ ಪ್ರತಿನಿಧಿಗಳು ಇದ್ದರು.