ಸೋಮವಾರಪೇಟೆ, ಆ. 30: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಸಮೀಪ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಗುಂಡಿಯಲ್ಲಿ ಶೇಖರಗೊಳ್ಳುವ ಮಲ-ಮೂತ್ರವನ್ನು ಹಗಲು ವೇಳೆಯಲ್ಲಿಯೇ ವಿಲೇವಾರಿ ಮಾಡುತ್ತಿರುವ ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಗಲು ವೇಳೆಯಲ್ಲಿ ಗುಂಡಿಯ ಮುಚ್ಚಳ ತೆಗೆದು ಯಂತ್ರದ ಮೂಲಕ ಮಲ-ಮೂತ್ರವನ್ನು ಹೊರತೆಗೆಯುತ್ತಿದ್ದು, ಈ ಸಂದರ್ಭ ದುರ್ವಾಸನೆ ಇಡೀ ವಾತಾವರಣವನ್ನು ವ್ಯಾಪಿಸುತ್ತಿದೆ. ಈ ಸಮಯದಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡಬೇಕಾಗಿದೆ. ಪಂಚಾಯಿತಿ ಸಿಬ್ಬಂದಿಗಳು ತಮಗಿಷ್ಟಬಂದ ಸಮಯದಲ್ಲಿ ಮಲ-ಮೂತ್ರದ ಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ಬಗ್ಗೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ವರ್ತಕರು, ಸಾರ್ವಜನಿಕರು ಆರೋಪಿಸಿದ್ದಾರೆ.ಜನಸಂಚಾರ ವಿರಳವಿರುವ ಸಮಯದಲ್ಲಿ ಅಥವಾ ರಾತ್ರಿಯ ವೇಳೆಯಲ್ಲಿ ಶೌಚ ಗೃಹದ ಬಾವಿಯನ್ನು ಸ್ವಚ್ಛಗೊಳಿಸಲು ಮುಂದಾಗಬೇಕು. ಈ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯವರು ಸಂಬಂಧಿಸಿದ ಸಿಬ್ಬಂದಿಗಳಿಗೆ ತಿಳಿಹೇಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.