ಮಡಿಕೇರಿ, ಸೆ. 15 : ಕುಶಾಲನಗರದ ಆಟೋಚಾಲಕ ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಕಗ್ಗೋಡ್ಲುವಿನಲ್ಲಿ ದನಗಳ ಸಾಗಾಟದ ಸಂದರ್ಭ ನಡೆದ ಹಲ್ಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ವಕೀಲ ಎ.ಕೆ.ಸುಬ್ಬಯ್ಯ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಪೊಲೀಸರು ಸಂಘ ಪರಿವಾರದ ಪರ ಇರುವದರಿಂದ ಈ ಎರಡು ಪ್ರಕರಣಗಳ ಪೊಲೀಸ್ ತನಿಖೆಯ ಬಗ್ಗೆ ನಂಬಿಕೆ ಇಲ್ಲವೆಂದು ಆರೋಪಿಸಿದರು. ಕಗ್ಗೋಡ್ಲುವಿನ ಗಣಪತಿ ಎಂಬವರಿಂದ ಕೊಂಡಂಗೇರಿಯ ವ್ಯಕ್ತಿಯೊಬ್ಬರು ದನಗಳನ್ನು ಖರೀದಿಸಿದ್ದು, ಅದನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಸುಮಾರು 20 ಮಂದಿಯ ಗುಂಪು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ, ಗುಂಡು ಹಾರಿಸಿದೆ.
ಈ ಬಗ್ಗೆ ದೂರು ನೀಡಲು ಮಡಿಕೇರಿ ಗ್ರಾಮಾಂತರ ಠಾಣೆಗೆ ಹಲ್ಲೆಗೊಳಗಾದವರು ತೆರಳಿದ ಸಂದರ್ಭ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ಕೆಲವರು ಪ್ರತಿಭಟನೆ ನಡೆಸಿದ ನಂತರ ದೂರನ್ನು ದಾಖಲಿಸಿಕೊಳ್ಳ ಲಾಗಿದೆಯಾದರೂ ಯಾರನ್ನೂ ಇಲ್ಲಿಯವರೆಗೆ ಬಂಧಿಸಿಲ್ಲ. ಪೊಲೀಸರು ಪ್ರಕರಣವನ್ನೇ ದಾಖಲಿಸಲು ಹಿಂದೇಟು ಹಾಕಿರುವದನ್ನು ಗಮನಿಸಿದರೆ ಜಿಲ್ಲೆಯ ಪೊಲೀಸರು ಅಲ್ಪಸಂಖ್ಯಾತ ರಿಗೆ ರಕ್ಷಣೆ ನೀಡುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.
ಕುಶಾಲನಗರದ ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಗೆ ಕಲ್ಲು ತೂರಿದ್ದೇ ಹತ್ಯೆಗೆ ಕಾರಣವೆಂದು ಪೊಲೀಸರೇ ಹೇಳಿದ್ದಾರೆ. ಆದರೆ ಪೊಲೀಸರ ಎದುರೇ ಕಲ್ಲು ತೂರಾಟ ನಡೆದಿದ್ದರೂ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಕಲ್ಲು ತೂರಿದವರನ್ನು ಬಂಧಿಸುವಂತೆ ಒತ್ತಾಯಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸಲಾಗಿದೆ ಎಂದು ಸುಬ್ಬಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕೆ.ಆರ್.ವಿದ್ಯಾಧರ್ ಹಾಗೂ ಪಿ.ಸಿ.ಹಸೈನಾರ್ ಉಪಸ್ಥಿತರಿದ್ದರು.