ಮಡಿಕೇರಿ, ಜು. 30: ಕೇಂದ್ರ ಆದಾಯ ತೆರಿಗೆ ಇಲಾಖೆ ಸೆಪ್ಟೆಂಬರ್ 30 ರೊಳಗಾಗಿ ಬಹಿರಂಗ ಪಡಿಸದಿರುವ ಆದಾಯ ಬಹಿರಂಗ ಪಡಿಸಿ ಎಂಬ ಘೋಷಣೆಯೊಂದಿಗೆ ಜಾರಿಗೆ ತಂದಿರುವ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಲೆಕ್ಕ ಪರಿಶೋಧಕ ಮಿತ್ತೂರು ಈಶ್ವರ ಭಟ್ ಕರೆ ನೀಡಿದ್ದಾರೆ.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆಯೋಜಿಸಲಾಗಿದ್ದ ಆದಾಯ ತೆರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜರ ಕಾಲದಲ್ಲಿಯೇ ತೆರಿಗೆ ಸಂಗ್ರಹ ಯೋಜನೆ ಜಾರಿಯಲ್ಲಿತ್ತು. ರಾಜಸ್ವ ರೂಪದಲ್ಲಿದ್ದ ತೆರಿಗೆ ಸಂಗ್ರಹಾತಿಯಲ್ಲಿ ಸಂಗ್ರಹವಾದ ಹಣವನ್ನು ರಾಜ್ಯದ ಪ್ರಗತಿಗೆ ಬಳಸಿಕೊಳ್ಳಲಾಗುತ್ತಿತ್ತು. ಈಗಿನ ಕಾಲದಲ್ಲಿ ತೆರಿಗೆ ಸಲ್ಲಿಸದೇ ಇರುವವರಿಂದಾಗಿ ತೆರಿಗೆಯನ್ನು ಪ್ರಮಾಣಿಕವಾಗಿ ಕಟ್ಟುವವರಿಗೇ ಹೆಚ್ಚಿನ ಹೊರೆಯಾಗುವಂತಾಗಿದೆ. ಹೀಗಾಗಿಯೇ ತೆರಿಗೆ ಸಂಗ್ರಹಾತಿಗೆ ಸರ್ಕಾರ ಅನೇಕ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದು, ಈಗಿನ ಅತ್ಯಾಧುನಿಕ ತಾಂತ್ರಿಕತೆಯಲ್ಲಿ ಪ್ರತೀಯೋರ್ವನ ಆರ್ಥಿಕ ವಹಿವಾಟು ಸರ್ಕಾರಕ್ಕೆ, ಆದಾಯ ತೆರಿಗೆ ಇಲಾಖೆಗೆ ಸುಲಭವಾಗಿ ತಿಳಿಯುತ್ತದೆ. ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳುವದು ಕಷ್ಟಕರವಾದ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ನಿಯಮಾನುಸಾರ ತೆರಿಗೆ ನೀಡುವದೇ ಸೂಕ್ತ ಮಾರ್ಗ ಎಂದರು. ಕಪ್ಪು ಹಣದ ನಿರ್ಮೂಲನೆಗೆ ಪಣತೊಟ್ಟಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ ಯೊಂದಿಗೆ ದೇಶದ ಪ್ರಜೆಗಳಾಗಿ ನಾವೂ ತೆರಿಗೆಯನ್ನು ಸರಿಯಾದ ಕಾಲಕ್ಕೆ, ಸೂಕ್ತ ರೀತಿಯಲ್ಲಿ ತುಂಬುವ ಮೂಲಕ ಕೈಜೋಡಿಸಬೇಕೆಂದು ಈಶ್ವರ ಭಟ್ ಹೇಳಿದರು.

ಕೊಡಗು ಜಿಲ್ಲಾ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ನಾಯರ್ ಮಾತನಾಡಿ, 30 ಸೆಪ್ಟ್ಟೆಂಬರ್ ಒಳಗಾಗಿ ಆನ್ ಲೈನ್ ಮೂಲಕ ಅಥವಾ ವಿಭಾಗೀಯ ಕಚೇರಿ ಮೂಲಕ ಈವರೆಗೂ ಬಹಿರಂಗ ಪಡಿಸದೇ ಇರುವ ಆದಾಯವನ್ನು ಬಹಿರಂಗಪಡಿಸುವ ಸುವರ್ಣಾವ ಕಾಶವನ್ನು ಸರ್ಕಾರ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕಾರ್ಯದರ್ಶಿ ಡಾ. ನವೀನ್, ಆದಾಯ ತೆರಿಗೆ ಅಧಿಕಾರಿ ಪದ್ಮಕುಮಾರ್ ಪಾಲ್ಗೊಂಡಿದ್ದರು.