*ಗೋಣಿಕೊಪ್ಪಲು, ಜ. 16: ಬದಲಾಗುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗಬೇಕು ಎಂದು ಹಿರಿಯ ವಕೀಲ ಅಜ್ಜಿನಿಕಂಡ ಟಿ. ಭೀಮಯ್ಯ ಹೇಳಿದರು.

ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಆಸಕ್ತಿ ಮತ್ತು ಭವಿಷ್ಯಕ್ಕೆ ಪೂರಕವಾಗುವ ಶಿಕ್ಷಣ ನೀಡಲು ವಿದ್ಯಾಸಂಸ್ಥೆಗಳು ಮುಂದಾಗಬೇಕು. ಅವರ ಆಸಕ್ತಿಗೆ ವಿರುದ್ಧವಾಗಿ ಯಾವದೇ ವಿಷಯವನ್ನು ಹೇರಬಾರದು ಎಂದು ತಿಳಿಸಿದರು. ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಮಾತನಾಡಿ, ತಮ್ಮ ಭಾಷೆ ಮತ್ತು ಸಂಸ್ಕøತಿಯನ್ನು ಮರೆಯಬಾರದು. ಹಿರಿಯರ ಆದರ್ಶಗಳನ್ನು ಮನನ ಮಾಡಿಕೊಂಡು ಉತ್ತಮ ಬದುಕಿನತ್ತ ಸಾಗಬೇಕು ಎಂದು ನುಡಿದರು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪಠ್ಯದ ಜತೆಗೆ ಇತರ ವಿಷಯಗಳನ್ನು ಅಧ್ಯಯನ ಮಾಡಿ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ನಿರ್ದೇಶಕರಾದ ಮೇಚಂಡ ಪೆಮ್ಮಯ್ಯ, ಅಡ್ಡೇಂಗಡ ಅರುಣ, ಅಡ್ಡೇಂಗಡ ಸಜನ್, ಅಳಮೇಂಗಡ ಸುರೇಶ್ ಹಾಜರಿದ್ದರು.

ನಿವೃತ್ತ ಪ್ರಾಂಶುಪಾಲ ಕೆ.ವಿ. ಶ್ರೀಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ, ಕೆ. ಚಂದ್ರಶೇಖರ್ ವರದಿ ವಾಚಿಸಿದರು. ಕೆ.ಜಿ. ಅಶ್ವಿನಿ ಕುಮಾರ್ ಸ್ವಾಗತಿಸಿ, ಬಳಿಕ ವಿದ್ಯಾರ್ಥಿಗಳಿಂದ ಜಾನಪದ ಹಾಗೂ ದೇಶಭಕ್ತಿಗೀತೆ ನೃತ್ಯ ಕಾರ್ಯಕ್ರಮ ನಡೆಯಿತು.