ಸೋಮವಾರಪೇಟೆ, ನ. 20: ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕಾಣಿಕೆ ನೀಡುತ್ತಿರುವ ಆಟೋ ಚಾಲಕರು ಸೋಮವಾರಪೇಟೆ ಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಯೋಜಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಕಾರಣರಾದರು.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 25ನೇ ವರ್ಷದ ವಾರ್ಷಿಕೋತ್ಸವ ಮತ್ತು 10ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ, ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ, ಸಾಂಸ್ಕøತಿಕ ರಸಮಂಜರಿ ಕಾರ್ಯಕ್ರಮಗಳು ಬೆಳಗ್ಗಿನಿಂದ ತಡ ರಾತ್ರಿಯವರೆಗೂ ನಡೆದು ಸಾರ್ವಜನಿಕರ ಮನಸೂರೆಗೊಂಡವು.

ಬೆಳಿಗ್ಗೆ 8 ಗಂಟೆಗೆ ಇಲ್ಲಿನ ಆಟೋ ನಿಲ್ದಾಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿತು. ನಂತರ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು. 9 ಗಂಟೆಗೆ ಕಕ್ಕೆಹೊಳೆ ಸಮೀಪದ ಬಸವೇಶ್ವರ ಪ್ರತಿಮೆ ಬಳಿಯಿಂದ ನೂರಾರು ಆಟೋಗಳ ಮೆರವಣಿಗೆ, ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, ಡೊಳ್ಳುಕುಣಿತದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ನಂತರ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ನಡೆಯಿತು. ನಂತರ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕುಣಿಯೋಣು ಬಾರಾ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ ಮಾತನಾಡಿ, ಆಟೋ ಚಾಲಕರು ತಮ್ಮ ದೈನಂದಿನ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವದು ಶ್ಲಾಘನೀಯ. ಕನ್ನಡ ಭಾಷೆ ಈ ನೆಲದ ಭಾಷೆಯಾಗಿದ್ದು, ಕನ್ನಡ ನಾಡು - ನುಡಿ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು. ಆಟೋ ಚಾಲಕರು ಆಟೋ ಚಾಲನೆ ಸಂದರ್ಭ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸೇವೆಗೆ ಸದಾ ಸಿದ್ಧರಿರಬೇಕು ಎಂದರು.

ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿರುವ ಆಟೋ ಚಾಲಕರ ಸಂಘದ ಕಾರ್ಯ ಶ್ಲಾಘನೀಯ ವಾಗಿದ್ದು, ಪ್ರತಿಯೊಬ್ಬರಲ್ಲೂ ಕನ್ನಡತನ ಮೈಗೂಡÀಬೇಕು. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬಿಟ್ಟು ಹೆಮ್ಮೆಯಿಂದ ನೆಲದ ಭಾಷೆ ಮಾತನಾಡಬೇಕು. ಕನ್ನಡದ ಅಳಿವು-ಉಳಿವು ನಮ್ಮ ಕೈಯಲ್ಲಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕನ್ನಡ ಅಭಿರುಚಿ ಮೂಡಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಜೆಡಿಎಸ್ ಮುಖಂಡ ವಿ.ಎಂ. ವಿಜಯ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೇವಲ 10ನೇ ತರಗತಿವರೆಗೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರೆಯುತ್ತಿದ್ದು, ಮುಂದಿನ ವಿದ್ಯಾಭ್ಯಾಸ ಕಷ್ಟಕರವಾಗಿದೆ. ಈ ಹಿನ್ನೆಲೆ ಕನ್ನಡದಲ್ಲಿಯೇ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಲತ್ತು ಒದಗಿಸಬೇಕು. ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಕನ್ನಡ ಆಡುಭಾಷೆಯಾಗಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

ಅನ್ಯ ಭಾಷೆಯನ್ನು ಕಲಿತರೂ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡ ನಾಡು - ನುಡಿ, ನೆಲ-ಜಲ ರಕ್ಷಣೆಗೆ ಪ್ರತಿಯೋರ್ವರೂ ಕೈಜೋಡಿಸಬೇಕು. ಎಲ್ಲರಲ್ಲೂ ಕನ್ನಡಾಭಿಮಾನ ಮೇಳೈಸಬೇಕು ಎಂದರು.

ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಕನ್ನಡ ಕಾಳಜಿ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಬಾರದು. ಜೀವನದ ಭಾಗವಾಗಬೇಕು.

ಪಾಶ್ಚಿಮಾತ್ಯ ಸಂಸ್ಕøತಿ ಬದಲಿಗೆ ನೆಲದ ಸಂಸ್ಕøತಿಯನ್ನು ಮೈಗೂಡಿಸಿ ಕೊಳ್ಳಬೇಕು. ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಆರ್. ಮೋಹನ್ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ರಕ್ಷಣಾ ವೇದಿಕೆಯ ಮಹಿಳಾ ಘಟಕ ಅಧ್ಯಕ್ಷೆ ರೂಪಾ ಸುರೇಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ದಾನಿ ಅರುಣ್ ಕಾಳಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ನಂತರ ನಡೆದ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ಸಭೀಕರ ಮನ ರಂಜಿಸಿತು. ಸಂಜೆ ರಸಮಂಜರಿ ಕಾರ್ಯಕ್ರಮಗಳು ನಡೆದವು.