ಶನಿವಾರಸಂತೆ, ಆ. 29: ಶನಿವಾರಸಂತೆ ಗ್ರಾ. ಪಂಚಾಯಿತಿಯ 1ನೇ ವಿಭಾಗದ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಶೇ. 63ರಷ್ಟು ಮತದಾನವಾಗಿದೆ.

ಚುನಾವಣಾ ಕಣದಲ್ಲಿರುವ ಎಸ್.ಎ. ಆದಿತ್ಯ, ಎಂ.ವಿ. ಪುನಿತ್ ಹಾಗೂ ಕೆ.ಟಿ. ಹರೀಶ್ ನಡುವೆ ತ್ರಿಕೋನ ಸ್ಪರ್ಧೆಯಿದೆ. ಪಂಚಾಯಿತಿಯ ಒಂದನೇ ವಿಭಾಗದಲ್ಲಿ ಒಟ್ಟು 1985 ಮತದಾರರಿದ್ದು, ಮತದಾನದಲ್ಲಿ 342 ಪುರುಷ ಹಾಗೂ 341 ಮಹಿಳಾ ಮತದಾರರು ಮತ ಚಲಾಯಿಸಿದರು. ಒಟ್ಟು 683 ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಪಿ. ದಿನೇಶ್ ತಿಳಿಸಿದ್ದಾರೆ.

ಚುನಾವಣಾಧಿಕಾರಿ ರಾಮಚಂದ್ರ ಮೂರ್ತಿ ಹಾಗೂ ಸಹಾಯಕಾಧಿಕಾರಿ ಜಿ.ಇ. ಪ್ರವೀಣ್ ಸ್ಥಳದಲ್ಲಿ ಹಾಜರಿದ್ದು, ತಾ. 31ರಂದು ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ. ಶನಿವಾರಸಂತೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ 1 ಮತದ ಅಂತರದಿಂದ ಪುರುಷ ಮತದಾರರ ಮೇಲುಗೈ ಆಗಿದೆ. ಮತದಾನದ ಕೊಠಡಿಯಲ್ಲಿ ಪಕ್ಷದ ಏಜೆಂಟರ್ ಗಳಿದ್ದರು. ಪಕ್ಷದ ಪ್ರಮುಖರೊಬ್ಬರು ಏಜಂಟರ ಸ್ಥಳದಲ್ಲಿ ಕುಳಿತು ಮತದಾರರಿಗೆ ಸಹಕರಿಸು ತ್ತಿದ್ದರು. ಇದನ್ನು ನೋಡಿದ ಪಕ್ಷವೊಂದರ ಅಭ್ಯರ್ಥಿ ಚುನಾವಣಾಧಿಕಾರಿಗೆ ತಿಳಿಸಿ ಅವರನ್ನು ಮತದಾನದ ಕೊಠಡಿ ಯಿಂದ ಹೊರ ಕಳುಹಿಸಲು ಸಫಲ ರಾದರು. ಪಕ್ಷವೊಂದರ ಸ್ಪರ್ಧಿ ಯೊಬ್ಬರು ತಮ್ಮ ಹೆಸರಿನ ಗುರುತಿನ ಚೀಟಿಯನ್ನು ಮತದಾರರಿಗೆ ಕೊಡುತ್ತಿದ್ದುದನ್ನು ಪಕ್ಷದ ಪ್ರಮುಖ ರೊಬ್ಬರು ವಿರೋಧಿಸುತ್ತಿದ್ದರು.