ಮಡಿಕೇರಿ, ಜೂ. 22 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜು.2 ರಂದು ರಾಜ್ಯಾದ್ಯಂತ ಸ್ಟುಡಿಯೋ ಬಂದ್‍ಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸುವದಾಗಿ ಸಂಘದ ಜಿಲ್ಲಾ ಕಾರ್ಯದರ್ಶಿ ಸುನೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೃತ್ತಿಪರ ಛಾಯಾಗ್ರಾಹಕರಿಗೆ ಜೀವವಿಮೆ, ಆರೋಗ್ಯ ವಿಮೆ, ಇಎಸ್‍ಐ, ಯಶಸ್ವಿನಿ, ಬಿಪಿಎಲ್ ಕಾರ್ಡ್ ಹಾಗೂ ಪಿಂಚಣಿ ಯೋಜನೆಯಡಿ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಸುಮಾರು 150 ಸ್ಟುಡಿಯೋಗಳಿದ್ದು, 450 ಕ್ಕೂ ಹೆಚ್ಚು ಛಾಯಾಗ್ರಾಹಕರು ಸಂಘದ ಸದಸ್ಯರಾಗಿದ್ದಾರೆ. ರಾಜ್ಯಾದ್ಯಂತ ಅದೆಷ್ಟೋ ಕುಟುಂಬ ಗಳು ಛಾಯಾಚಿತ್ರಗ್ರಹಣವನ್ನು ಆಧಾರವಾಗಿಸಿಕೊಂಡು ಬದುಕು ನಡೆಸುತ್ತಿವೆ. ಸರಕಾರಗಳು ಅಗತ್ಯ ನೆರವನ್ನು ನೀಡದೆ ಛಾಯಾಚಿತ್ರ ಗಾರರನ್ನು ನಿರ್ಲಕ್ಷಿಸುತ್ತಿವೆ ಎಂದು ಸುನಿಲ್ ಆರೋಪಿಸಿದರು.

ಛಾಯಾಗ್ರಾಹಕರು ಜು.2 ರಂದು ಪ್ರತಿಭಟನೆಯ ಮೂಲಕ ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆÉಯಲಿದ್ದಾರೆ. ಸ್ಟುಡಿಯೋದಲ್ಲಿ ತೆಗೆದ ಪಾಸ್ ಪೋರ್ಟ್ ಫೋಟೋಗಳನ್ನೆ ಸರಕಾರಿ ಕೆಲಸ ಕಾರ್ಯಗಳ ಅವಶ್ಯಕತೆಗೆ ಉಪಯೋಗಿಸು ವಂತಾಗಬೇಕು, ಛಾಯಾಗ್ರಾಹಕರನ್ನು ಉಳಿಸಿ ಬೆಳೆಸಲು ಪ್ರತ್ಯೇಕ ‘ಅಕಾಡೆಮಿ’ ಸ್ಥಾಪನೆಯಾಗಬೇಕು, ನುರಿತ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿ ಪುರಸ್ಕಾರವನ್ನು ನೀಡಬೇಕು, ಪ್ರತಿ ಜಿಲ್ಲೆಯಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮ ಹಾಗೂ ಜಿಲ್ಲಾ ಉತ್ಸವಗಳ ಛಾಯಾಗ್ರಹಣದ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ವೃತ್ತಿಪರ ಛಾಯಾಗ್ರಾಹಕರಿಗೆ ನೀಡಬೆÉೀಕು, ಪ್ರತೀ ಚುನಾವಣೆ ಸಂದರ್ಭ ಛಾಯಾಗ್ರಹಣದ ಅವಕಾಶವನ್ನು ವೃತ್ತಿಪರ ಛಾಯಾಗ್ರಾಹಕರಿಗೆ ಒದಗಿಸಬೇಕು, ಸರಕಾರಿ ವ್ಯಾಟ್‍ಕಾಯಿದೆಯ ಪ್ರಕಾರ ಛಾಯಾಗ್ರಹಣದ ಹಳೆ ಬಾಕಿಯೆಂದು 2004-05ರಿಂದ ಕಟ್ಟಲು ಹೇಳಿರುವ ಕಂದಾಯವನ್ನೆಲ್ಲ ಮನ್ನಾಮಾಡಿ, 2015ರಿಂದೀಚೆಗೆ ಕಟ್ಟಲು ಆದೇಶ ನೀಡಬೇಕು, ಛಾಯಾಗ್ರಾಹಕರಿಗೆ ಪ್ರತ್ಯೇಕ ಕಲ್ಯಾಣ ನಿಧಿಯನ್ನು ಸರಕಾರ ಸ್ಥಾಪಿಸಬೇಕು, ರಾಜ್ಯದ ಎಲ್ಲಾ ಛಾಯಾಗ್ರಾಹಕರ ಮಕ್ಕಳಿಗೆ ಆರ್‍ಟಿಇ ಮೂಲಕ ವಿದ್ಯಾಭ್ಯಾಸ ದೊರಕುವಂತೆ ಮಾಡಬೆÉೀಕು ಮತ್ತು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು, ಸರ್ಕಾರಿ ವೃತ್ತಿಯಲ್ಲಿದ್ದು ಛಾಯಾಗ್ರಹಣ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಗೊಳಿಸಬೇಕು, ಪ್ರತಿ ಜಿಲ್ಲೆಗೊಂದು ‘ಛಾಯಾ ಭವನ’ ನಿರ್ಮಿಸಲು ಸರ್ಕಾರದಿಂದ ನಿವೇಶನ ಹಾಗೂ ಆರ್ಥಿಕ ನೆರವು ನೀಡಬೇಕು ಎಂಬ ಹಲವು ಬೇಡಿಕೆಯನ್ನು ಸರಕಾರದ ಮುಂದಿಟ್ಟು ಬಂದ್ ನಡೆಸಲಾಗು ವದೆಂದು ಸುನಿಲ್ ತಿಳಿಸಿದರು.

ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಜು.2ರಂದು ಶಾಂತಿಯುತ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗುವದು ಎಂದರು. ಜಿಲ್ಲೆಯಲ್ಲಿ ಸರಕಾರದ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳ ಛಾಯಾಗ್ರಹಣಕ್ಕೆ ಹೊರ ಜಿಲ್ಲೆಯವರನ್ನು ಕರೆಯಿಸದೆ ಸ್ಥಳೀಯರಿಗೇ ಅವಕಾಶ ನೀಡ ಬೇಕೆಂದು ಸುನೀಲ್ ಒತ್ತಾಯಿಸಿದರು.