ಕೂಡಿಗೆ, ನ. 8: ಕೊಡಗಿನಲ್ಲಿ ಮಳೆಯು ಸಮರ್ಪಕವಾಗಿ ಬಾರದೆ ಬರಗಾಲದ ಛಾಯೆ ಎದುರಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದರಂತೆ ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಜಿಲ್ಲಾ ಕರ್ನಾಟಕ ರೈತ ಸಂಘ ಅಧ್ಯಕ್ಷ ಎಸ್.ಆರ್. ಮಂಜುನಾಥ್ ಹಾಗೂ ಕಾರ್ಯದರ್ಶಿ ಕೆ.ಟಿ. ಆನಂದ ಕೂಗೂರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹಣೆಯ ಪ್ರಮಾಣ ಕಡಿಮೆಯಿದ್ದರೂ ಕೂಡ ತಮಿಳುನಾಡಿಗೆ ನೀರನ್ನು ಹರಿಸುವ ಸದುದ್ಧೇಶದಿಂದ ಮೇಲಧಿಕಾರಿಗಳ ಆದೇಶದನ್ವಯ ಇದ್ದ ನೀರನ್ನು ನದಿಗೆ ಹರಿಸಲಾಗಿದ್ದು, ರೈತರ ಜಮೀನಿಗೆ ನೀರಿಲ್ಲದಂತಾಗಿದೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಬೆಳೆಗಳು ಒಣಗುತ್ತಾ ಬಂದಿದ್ದು, ರೈತರಿಗೆ ಅಪಾರ ನಷ್ಟವಾಗಿದೆ. ಸೋಮವಾರಪೇಟೆ ತಾಲೂಕಿನ ಎಲ್ಲಾ ರೈತರುಗಳು ಸಹಕಾರ ಸಂಘಗಳಿಂದ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟ ಎದುರಾಗಿದೆ. ರೈತರ ಸಾಲ ಮನ್ನಾ ಮಾಡುವದರ ಜೊತೆಗೆ ಸೋಮವಾರಪೇಟೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.