ಶ್ರೀಮಂಗಲ, ಸೆ. 30: ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ನಷ್ಟವಾಗಿರುವದಕ್ಕೆ ರಾಜ್ಯ ಸರ್ಕಾರ ತುರ್ತಾಗಿ ರೂ. 75 ಕೋಟಿ ಬಿಡುಗಡೆ ಮಾಡಿದೆ. ಹಾಗೆಯೇ ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸದಿರುವದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹಾಗಾಗಿ ಆ ವ್ಯಾಪ್ತಿಯ ರೈತರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ತೋರುತ್ತಿರುವ ಕಾಳಜಿ ಸ್ವಾಗತಾರ್ಹವಾಗಿದೆ. ಆದರೆ ಎರಡು ವರ್ಷದ ಹಿಂದೆಯೇ ಮಳೆಯಿಂದ ಬೆಳೆ ನಷ್ಟವಾದ ಕೊಡಗು ಜಿಲ್ಲೆಯ ಬೆಳೆಗಾರರಿಗೆ ಇನ್ನೂ ಪರಿಹಾರ ಬಿಡುಗಡೆ ಮಾಡದೆ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳೆಗಾರರ ಪ್ರಮುಖರ ಸಭೆಯಲ್ಲಿ ಅತಿವೃಷ್ಟಿಯಿಂದ ಕಾಫಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಅವಕಾಶವಿದ್ದರೂ, ಜಿಲ್ಲಾಡಳಿತ, ಕಾಫಿ ಮಂಡಳಿ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ. ಇದರಿಂದ ಜಿಲ್ಲೆಯ ಕಾಫಿ ಬೆಳೆಗಾರರು ಅತಿವೃಷ್ಟಿ, ಹವಾಮಾನ ವೈಪರಿತ್ಯಕ್ಕೆ ತುತ್ತಾಗಿ ಹಲವು ದಶಕದಿಂದ ಬೆಳೆ ನಷ್ಟ ಅನುಭವಿಸುತ್ತಲೇ ಬಂದಿದ್ದರೂ ಜಿಲ್ಲೆಯ ಬೆಳೆಗಾರರ ನೈಜ ಪರಿಸ್ಥಿತಿಯನ್ನು ಸರಕಾರಕ್ಕೆ ಸಮೀಕ್ಷೆ ಮಾಡಿ ವರದಿ ಆಲಿಸದೆ ವಾಸ್ತವಾಂಶವನ್ನು ಮರೆ ಮಾಚುತ್ತಲೇ ಬಂದಿದೆ ಎಂಬ ಅಸಮಾಧಾನ ವ್ಯಕ್ತವಾಯಿತು.

ಜಿಲ್ಲಾಡಳಿತ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವಾಸ್ತವಾಂಶವನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕು. ಬೆಳೆಗಾರರ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇದರಿಂದ ಸರಕಾರದ ಮಟ್ಟದಲ್ಲಿ ದಾಖಲಾಗುತ್ತದೆ. ಬ್ಯಾಂಕುಗಳು ಸಹ ಬೆಳೆಗಾರರು ಸಾಲ ಮರುಪಾವತಿ ಮಾಡಲಾಗದ ಪರಿಸ್ಥಿತಿಯನ್ನು ಮನಗಾಣು ವಂತಾಗುತ್ತದೆ. ಜೊತೆಗೆ ಕೇಂದ್ರ-ರಾಜ್ಯ ಸರಕಾರಗಳಿಗೆ ಕಾಫಿ ಬೆಳೆಗಾರರ ಸಂಕಷ್ಟ ಅರಿತು ವಿಶೇಷ ಪ್ಯಾಕೇಜ್ ನೀಡಲು ಈ ವರದಿಗಳನ್ನು ಪರಿಗಣಿಸುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಅತಿವೃಷ್ಟಿಯಿಂದ 2014-15 ಸಾಲಿನಲ್ಲಿ ಜಿಲ್ಲೆಯ 123 ಗ್ರಾಮಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದು ರೂ 22 ಕೋಟಿ ಪರಿಹಾರ ನೀಡಬೇಕಾಗಿದೆ. ಆದರೆ ಇದುವರೆಗೂ ಬಿಡುಗಡೆಯಾಗಿಲ್ಲ. 2015-16ನೇ ಸಾಲಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಯಾದ ಕರಿಮೆಣಸು ಸಹ ಹವಾಮಾನ ವೈಪರಿತ್ಯದಿಂದ ಶೇ 90ರಷ್ಟು ಬೆಳೆ ಕುಂಠಿತವಾಗಿದ್ದು, ಈ ಸಾಲಿನಲ್ಲಿ ಹತ್ತು ದಿನದಲ್ಲಿ ಸುರಿದ 50 ರಿಂದ 60 ಇಂಚು ಮಳೆ ಹಾಗೂ ಬಿರುಗಾಳಿಯಿಂದ ಕಾಫಿ ಫಸಲು ಸಹ ನಷ್ಟವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ನಷ್ಟದ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿಲ್ಲ. ಪ್ರಸಕ್ತ ವರ್ಷ ಹವಾಮಾನ ವೈಪರಿತ್ಯದಿಂದ 2016-17ರಲ್ಲಿ ಸಹ ಕರಿಮೆಣಸು ಫಸಲು ಶೇ.80ರಷ್ಟು ಕುಂಠಿತವಾಗಿದೆ. ಇನ್ನೊಂದು ಕಡೆ ಬೇಸಿಗೆಯ ತೀವ್ರ ತಾಪಮಾನಕ್ಕೆ ತುತ್ತಾಗಿ ಕೃತಕ ನೀರಾವರಿ ನೀಡಲು ಅನುಕೂಲ ಇಲ್ಲದ ಹಾಗೂ ನೀರಿನ ಲಭ್ಯತೆ ಇಲ್ಲದೆ ಬರಗಾಲದಿಂದ ಕಾಫಿ ಫಸಲು ಸಹ ನಷ್ಟವಾಗಿದೆ. ಆದರೆ ಬೆಳೆ ಹಾನಿಯಾಗಿ 3-4 ತಿಂಗಳಾದರೂ ಜಿಲ್ಲಾಡಳಿತ ಸಮೀಕ್ಷೆ ಕೈಗೊಂಡಿಲ್ಲ. ಆದರೆ ರಾಜ್ಯದ ಬೇರೆ ಜಾಗದಲ್ಲಿ ಬೆಳೆ ಹಾನಿಯಾದ ತಕ್ಷಣವೇ ಬೆಳೆ ಹಾನಿಯ ಸಮೀಕ್ಷೆ ಹಾಗೂ ಪರಿಹಾರ ನೀಡಲು ಕಾಳಜಿ ವಹಿಸುತ್ತಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.

ವೀರಾಜಪೇಟೆ ತಾಲೂಕನ್ನು ಸತತ 2ನೇ ವರ್ಷ ಬರಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಿದೆ. ಆದರೆ ಇದುವರೆಗೆ ಬರ ಪರಿಹಾರ ಮೂಲಕ ಬೆಳೆ ಹಾನಿಗೆ ಯಾವದೇ ಪರಿಹಾರ ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಪಧಾಧಿಕಾರಿಗಳಾದ ಅಯ್ಯಮಾಡ ಉದಯ, ಐಪುಮಾಡ ಶಂಭು ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.