ಮಡಿಕೇರಿ, ಅ. 6: ಐತಿಹಾಸಿಕ ನಾಡ ಮಡಿಕೇರಿ ದಸರಾ ಜನೋತ್ಸವಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ದಿನಗಣನೆ ಆರಂಭವಾಗುತ್ತಿರುವಂತೆ ಮಂಜಿನ ನಗರಿ ರಂಗೇರುತ್ತಿದೆ. ಮುದ್ದು ರಾಜನ ಕೇರಿಯಲ್ಲಿ ಉತ್ಸವದ ಕಳೆ ಮೂಡಿದೆ. ಜಗದ್ವಿಖ್ಯಾತ ಮೈಸೂರು ದಸರಾಕ್ಕಿಂತ ವಿಭಿನ್ನವಾಗಿರುವ ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳಲು ನಾಡಿನ ಜನತೆ ಉತ್ಸುಕತೆಯಲ್ಲಿದ್ದಾರೆ. ಸರಕಾರದ ಅನುದಾನದ ನಿರೀಕ್ಷೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ, ವಿವಿಧ ಉಪ ಸಮಿತಿಗಳು ಉತ್ಸವದ ಯಶಸ್ವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಉತ್ಸವಕ್ಕೆ ಮೆರುಗು ನೀಡುವ, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದಶಮಂಟಪಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.

ಇತಿಹಾಸವನ್ನು ಸಾರುವ ವಿಜಯ ದಶಮಿ ಹಬ್ಬ ತಾ. 11 ರಂದು ನಡೆಯಲಿದೆ. ಅದಕ್ಕೂ ಮುನ್ನ ತಾ. 10 ರಂದು ಆಯುಧಾ ಪೂಜೆ ನೆರವೇರಲಿದೆ. ಕಳೆದ ಹಲವು ವರ್ಷಗಳಿಂದ ಮಡಿಕೇರಿ ದಸರಾ ಉತ್ಸವವನ್ನು ಜನರ ಸಹಭಾಗಿತ್ವದೊಂದಿಗೆ ಜನೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈಗಾಗಲೇ ಕರಗ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆತ್ತಿದ್ದು, ನಾಡಿನ ಸುಭೀಕ್ಷೆಗಾಗಿ ನಾಲ್ಕು ಶಕ್ತಿ ಕರಗ ದೇವತೆಗಳು ನಗರ ಪ್ರದಕ್ಷಿಣೆ ಹಾಕುತ್ತಿವೆ. ಒಂಭತ್ತು ದಿನಗಳ ಕಾಲ ಮನರಂಜನೆಗಾಗಿ ಗಾಂಧೀ ಮೈದಾನದಲ್ಲಿ ನಿರ್ಮಿಸಲಾಗಿರುವ ‘ಕಲಾಸಂಭ್ರಮ’ ವರ್ಣರಂಜಿತ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿ ರಾತ್ರಿ ನಡೆಯುತ್ತಿದೆ. ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು, ಆಟೋಟಗಳು ಪೂರ್ಣಗೊಂಡು ತಾ. 8 ರಂದು ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

ಸಾಹಿತ್ಯ ಚಟುವಟಿಕೆಗಳಿಗೂ ಇಂಬು ನೀಡುವ ನಿಟ್ಟಿನಲ್ಲಿ ಬಹುಭಾಷಾ ಕವಿಗೋಷ್ಠಿ ಏರ್ಪಾಡು ಮಾಡಲಾಗಿದ್ದು, ತಾ. 8 ರಂದು ಬಾಲಭವನದಲ್ಲಿ ನಡೆಯಲಿದೆ.

ಎಲ್ಲೆಲ್ಲೂ ರಂಗು...

ನವರಾತ್ರಿ ಉತ್ಸವ ಆರಂಭಗೊಂಡಂತೆಯೇ ಮಂಜಿನ ನಗರಿ ರಂಗೇರಿದೆ... ಎಲ್ಲ ದೇವಾಲಯಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ರಾಜ ಮಾರ್ಗಗಳಲ್ಲಿ ಬಣ್ಣದ ದೀಪಗಳ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಕಟ್ಟಡ, ಅಂಗಡಿ ಮಳಿಗೆಗಳು ಸುಣ್ಣ-ಬಣ್ಣಗಳಿಂದ ಮಿರುಗುತ್ತಿವೆ. ಗುಂಡಿ ಬಿದ್ದ ರಸ್ತೆಗಳು ಉತ್ಸವದ ನೆಪದಲ್ಲಿ ‘ತೇಪೆ ಭಾಗ್ಯ’ ಕಾಣುತ್ತಿವೆ.

ಮಂಟಪಗಳ ತಯಾರಿ

ಮಡಿಕೇರಿ ದಸರಾ ಉತ್ಸವಕ್ಕೆ ವಿಶೇಷ ಮೆರುಗು ನೀಡುವದು ದಶಮಂಟಪಗಳ ಶೋಭಾಯಾತ್ರೆ. ಈ ಬಾರಿ ಒಂದಕ್ಕಿಂತ ಮತ್ತೊಂದು ಎಂಬಂತೆ ಮಂಟಪಗಳ ತಯಾರಿ ಬಿರುಸಿನಿಂದ ನಡೆಯುತ್ತಿದೆ. ನಾಲ್ಕೈದು ತಿಂಗಳಿಂದಲೇ ಮಂಟಪಗಳ ತಯಾರಿಯಲ್ಲಿ ಆಯಾಯ ಮಂಟಪ ಸಮಿತಿಯವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುರಾಸುರರ ಕಾಳಗ, ದೈತ್ಯಶಕ್ತಿಗಳ ಸಂಹಾರದ ಕಥಾ ಹಂದರಗಳನ್ನು ಹೆಣೆದ ವಿವಿಧ ಕಲಾಕೃತಿಗಳ ಚಲನ-ವಲನÀಗಳನ್ನೊಳಗೊಂಡ ಉತ್ಸವ ಮಂಟಪಗಳು ಗಮನ ಸೆಳೆಯಲಿವೆ. ಈಗಾಗಲೇ ಉತ್ಸವ ಮಂಟಪ ಸಮಿತಿಯವರು ಮಂಟಪಗಳ ಅಂತಿಮ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.