ವೀರಾಜಪೇಟೆ, ಜು. 1: ಕಳೆದ ಐದು ದಿನಗಳಿಂದ ತಾಲೂಕಿನಾದ್ಯಂತ ಬಿದ್ದ ಭಾರೀ ಮಳೆಗೆ ನಿನ್ನೆವರೆಗೆ ಒಟ್ಟು 7 ಮನೆಗಳು ಭಾಗಶ: ಜಖಂಗೊಂಡಿವೆ. ಕಂದಾಯ ಸಿಬ್ಬಂದಿಗಳ ಸಮೀಕ್ಷೆ ಪ್ರಕಾರ 7 ಮನೆಗಳಿಂದ ಒಟ್ಟು ರೂಪಾಯಿ ಮೂರು ಲಕ್ಷದ ಹತ್ತು ಸಾವಿರ ನಷ್ಟ ಸಂಭವಿಸಿದೆ. ಈ ಪೈಕಿ ಪೊನ್ನಂಪೇಟೆ 2 ಹಾಗೂ ವೀರಾಜಪೇಟೆಯ ಒಂದು ಮನೆಗೆ ಪರಿಹಾರ ನೀಡಲಾಗಿದೆ ಎಂದು ಪರಿಹಾರ ವಿಭಾಗದ ರವಿ ಕುಮಾರ್ ತಿಳಿಸಿದ್ದಾರೆ.

ತಾಲೂಕಿನಲ್ಲಿ ಬಿದ್ದ ಭಾರೀ ಮಳೆಗೆ ಸಿದ್ದಾಪುರ ಬಳಿಯ ಗುಹ್ಯದಲ್ಲಿ ಅಬೂಬಕ್ಕರ್ ಎಂಬವರಿಗೆ ಸೇರಿದ 1 ಮನೆ, ಅಮ್ಮತ್ತಿಯಲ್ಲಿ 1, ಪೊನ್ನಂಪೇಟೆಯಲ್ಲಿ 2 ವೀರಾಜಪೇಟೆ ಹೆಗ್ಗಳ ಗ್ರಾಮದಲ್ಲಿ 2 ಹಾಗೂ ವೀರಾಜಪೇಟೆ ಪಟ್ಟಣದ ಗಾಂಧಿನಗರದಲ್ಲಿ 1 ಮನೆ ಸೇರಿದಂತೆ ಒಟ್ಟು 7 ಮನೆಗಳು ಭಾಗಶ: ಜಖಂಗೊಂಡಿವೆ.

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ ಒಟ್ಟು 0.70 ಇಂಚು ಮಳೆ ಸುರಿದಿದೆ. ನಿನ್ನೆ ಅಪರಾಹ್ನದಿಂದ ಮಳೆ ರಭಸ ಕಡಿಮೆಯಾಗಿದ್ದು ಇಂದು ಬೆಳಗ್ಗಿನಿಂದಲೇ ಮಳೆ ಕುಂಠಿತಗೊಂಡಿದೆ. ಕದನೂರು, ಆರ್ಜಿ ವಿವಿಧೆಡೆಗಳಲ್ಲಿ ನೀರಿನಿಂದ ಜಲಾವೃತವಾದ ಗದ್ದೆಗಳಲ್ಲೂ ನೀರಿನ ಪ್ರಮಾಣ ಇಳಿಮುಖಗೊಳ್ಳುತ್ತಿದೆ.