ಮಡಿಕೇರಿ, ಜ. 18: ನಗರಸಭಾ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಬಿಜೆಪಿಯವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಂಡಿದ್ದ ಸದಸ್ಯರಿಬ್ಬರನ್ನು ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬಾರದೆಂದು ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರೆ, ಸಭಾಧ್ಯಕ್ಷರು ಏಕಾಎಕಿ ಸಭೆಯನ್ನೇ ಮುಂದೂಡಿದರು. ಆಡಳಿತ ಪಕ್ಷದವರ ಧೋರಣೆಯನ್ನು ಖಂಡಿತ ವಿಪಕ್ಷ ಬಿಜೆಪಿ ಸದಸ್ಯರು ಆಡಳಿತರೂಢರ ವಿರುದ್ಧ ಧಿಕ್ಕಾರ ಕೂಗಿದರು. ಮತ್ತೆ ಹಿರಿಯ ಕಾಂಗ್ರೆಸ್ ಸದಸ್ಯರ ಮಧ್ಯಸ್ಥಿಕೆಯಿಂದ ಸಂದಾನದೊಂದಿಗೆ ಸಭೆ ಮುಂದುವರಿಸಿದ ವಿಚಿತ್ರ ಸನ್ನಿವೇಶ ನಗರ ಸಭೆಯಲ್ಲಿಂದು ಎದುರಾಯಿತು. ಸದಸ್ಯರುಗಳ ಸ್ಥಾನಪಲ್ಲಟದ ವಿಚಾರ ದೊಡ್ಡ ರಂಪಾಟಕ್ಕೆ ಕಾರಣವಾಯಿತು.

ತಾ. 16 ರಂದು ನಡೆಯಬೇಕಿದ್ದ ನಗರಸಭೆ ಸಾಮಾನ್ಯ ಸಭೆ ಕಾಂಗ್ರೆಸ್ ಮುಖಂಡ ಬಿ.ಟಿ. ಪ್ರದೀಪ್ ಅವರ ಅಕಾಲಿಕ ನಿಧನದಿಂದಾಗಿ ಮುಂದೂಡಲ್ಪಟ್ಟು ಇಂದಿಗೆ ನಿಗದಿಯಾಗಿತ್ತು. ಬೆಳಿಗ್ಗೆ 11.30ಕ್ಕೆ ಸಭೆ ಆರಂಭವಾಗಬೇಕಿತ್ತು. ಸದಸ್ಯರುಗಳೆಲ್ಲ ಸಭೆಗೆ ಆಗಮಿಸಿ ಅವರವರಿಗೆ ಮೀಸಲಿರಿಸಿದ್ದ ಆಸನಗಳಲ್ಲಿ, ಆಸೀನರಾಗಿದ್ದರು. ಈ ನಡುವೆ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ಸಾಲಿನಲ್ಲಿ ಮಾಜಿ ಅಧ್ಯಕ್ಷೆ ಶ್ರೀಮತಿ ಬಂಗೇರ ಹಾಗೂ ಮೀಣಾಕ್ಷಿ ಅವರುಗಳು ಅಸೀನರಾಗಿದ್ದರು. ಇದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ‘ ಈ ಇಬ್ಬರು ಸದಸ್ಯರುಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರುಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವರು ಇಲ್ಲಿ ಕೂರಬಾರದು, ಅಲ್ಲಿಂದ ಎಬ್ಬಿಸಿ’ ಎಂದು ಒತ್ತಾಯಿಸಿದರು. ನಾಮನಿರ್ದೇಶಿತ ಸದಸ್ಯರುಗಳಾದ ಕೆ.ಎಂ.ವೆಂಕಟೇಶ್ ಹಾಗೂ ಟಿ.ಹೆಚ್. ಉದಯ ಕುಮಾರ್ ಅವರುಗಳು ಕೂಡ ಇಬ್ಬರನ್ನು ಎಬ್ಬಿಸುವಂತೆ ಪಟ್ಟು ಹಿಡಿದರು. ಶ್ರೀಮತಿ ಹಾಗೂ ವೀಣಾಕ್ಷಿ ಅವರುಗಳು ‘ ನಮಗೆ ಮೀಸಲಿಟ್ಟಿರುವ, ನಮ್ಮ ಹೆಸರಿನ ಫಲಕ ಇರುವ ಜಾಗದಲ್ಲಿ ನಾವು ಕುಳಿತಿದ್ದೇವೆ ನಾವು ಇಲ್ಲಿಂದ ಕದಲುವದಿಲ್ಲವೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ‘ಕಳೆದ 3-4 ಸಭೆಗಳಲ್ಲಿ ಈ ಇಬ್ಬರು ಬಿಜೆಪಿ ಸದಸ್ಯರ ಸಾಲಿನಲ್ಲಿ ಕುಳಿತಿದ್ದರು. ಇದೀಗ ಇಲ್ಲಿಗೆ ಬಂದಿದ್ದಾರೆ. ಅವಕಾಶ ನೀಡಬಾರದು’ ಎಂದು ಮೂವರು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಬಿಜೆಪಿಯವರ ಬೆಂಬಲ

ಇಬ್ಬರು ಮಹಿಳಾ ಸದಸ್ಯರನ್ನು ಕುಳಿತಲ್ಲಿಂದ ಎಬ್ಬಿಸಬೇಕೆಂದು ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್,

(ಮೊದಲ ಪುಟದಿಂದ) ಮಹಿಳಾ ಸದಸ್ಯರಾದ ಅನಿತಾ ಪೂವಯ್ಯ ಇನ್ನಿತರರು ಮಹಿಳಾ ಸದಸ್ಯರ ಬೆಂಬಲಕ್ಕೆ ನಿಂತರು. ‘ಆ ಇಬ್ಬರು ಆಡಳಿತ ಪಕ್ಷದಲ್ಲಿದ್ದು, ಅದೇ ಸ್ಥಳದಲ್ಲಿ ಕುಳಿತಿದ್ದಾರೆ. ಮೊನ್ನೆ ಸ್ಥಾಯಿ ಸಮಿತಿ ಸಭೆ ನಡೆಯುವಾಗ ಅವರು ಅದೇ ಸ್ಥಳದಲ್ಲಿ ಕುಳಿತಿದ್ದರು. ಆಗಲೂ ನಿಮಗೆ ಹಿನ್ನಡೆಯಾಗಿದೆ. ಈಗ ಯಾಕೆ ಬೇಡ ಹೇಳ್ತೀರಾ’ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯ ನಂದಕುಮಾರ್ ಹಾಗೂ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರುಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ‘ ಕಾಂಗ್ರೆಸ್ ಮನೆ ಒಡೆದು ಹಾಳು ಮಾಡಲು ಆ ಸದಸ್ಯರು ನಿಮಗೆ ಬೇಕಿತ್ತು. ಈಗ ದೂರ ಮಾಡುತ್ತಾ ಇದ್ದೀರಾ, ಮನೆ ಹಾಳು ಕೆಲಸ ಮಾಡ್ತೀರಾ’ ಎಂದು ಪ್ರಕಾಶ್ ಆಚಾರ್ಯ ದೂರಿದರು.

‘ ಮನೆ ಹಾಳು ಕೆಲಸ ಮಾಡ್ತಿರೋದು ನೀವು, ನಿಮಗೆ ಅಭಿವೃದ್ಧಿ ಬಗ್ಗೆ ಚಿಂತನೆ, ಕಾಳಜಿ ಇಲ್ಲ. ಸೀಟ್‍ಗಾಗಿ ಜಗಳ ಮಾಡೋದು’ ಎಂದು ಪೊನ್ನಪ್ಪ ಹಾಗೂ ಪ್ರಕಾಶ್ ತಿರುಗೇಟು ನೀಡಿದರು.

‘ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ನಮ್ಮೊಂದಿಗೆ ಕೂರೋದು ಬೇಡ, ಅವರನ್ನು ಎಬ್ಬಿಸದಿದ್ದರೆ ನಾವು ಹೊರ ಹೋಗುತ್ತೇವೆ’ ಎಂದು ವೆಂಕಟೇಶ್ ಹಾಗೂ ಉದಯಕುಮಾರ್ ಹೊರ ಹೋಗಲು ಮುಂದಾದರೂ ಈ ಸಂದರ್ಭ ವೀಣಾಕ್ಷಿ ಹಾಗೂ ಶ್ರೀಮತಿ ಇಷ್ಟ ಬಂದ ಹಾಗೆ ಅವರುಗಳಿಗೆ ಪ್ರತ್ಯುತ್ತರ ನೀಡಿದರು.

‘ ಪಕ್ಷದಿಂದ ಉಚ್ಛಾಟನೆ ಮಾಡಿದ ಮಾತ್ರಕ್ಕೆ ಅವರನ್ನು ನಗರಸಭಾ ಸದಸ್ಯತ್ವ ಸ್ಥಾನದಿಂದ ಅಮಾನತು ಮಾಡಿಲ್ಲ. ಇದ್ದರೆ ಆದೇಶ ತೋರಿಸಿ, ಅವರು ಆಡಳಿತ ಪಕ್ಷದವರೇ’ ಎಂದು ಪೊನ್ನಪ್ಪ ಹಾಗೂ ಪ್ರಕಾಶ್ ಗುಡುಗಿದರು.

ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಹಾಗೂ ಎಸ್‍ಡಿಪಿಐನ ಮನ್ಸೂರ್, ಪೀಟರ್ ಅವರುಗಳು ಸಮಾಧಾನಿಸಲು ಯತ್ನಿಸಿದರಾದರೂ ಫಲ ಕಾಣಲಿಲ್ಲ.

ಕಾಂಗ್ರೆಸ್ಸಿಗರ ಸಭಾತ್ಯಾಗ

ಪರಸ್ಪರ ಚರ್ಚೆ, ಗೊಂದಲ, ರಂಪಾಟ ನಡೆಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರುಗಳೆಲ್ಲ ಸಭೆಯಿಂದ ಹೊರ ನಡೆದರು. ಸದಸ್ಯ ನಂದಕುಮಾರ್ ಮುಂದಾಳತ್ವದಲ್ಲಿ ವಿಪಕ್ಷದವರನ್ನು ಬೊಟ್ಟು ಮಾಡುತ್ತಾ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿ ಹೊರ ನಡೆದರು.

ಸಭೆ ಮುಂದೂಡಿಕೆ

ಕಾಂಗ್ರೆಸ್ ಸದಸ್ಯರು ಹೊರ ನಡೆದ ಬಳಿಕ ಬಿಜೆಪಿ ಸದಸ್ಯರು ಸಭೆ ಮುಂದುವರಿಸುವಂತೆ ಆಯುಕ್ತರಲ್ಲಿ ಕೋರಿದರು. ಸಭೆಗೆ ಅಗತ್ಯವಿರುವ 11 ಮಂದಿ ಸದಸ್ಯರ ಕೋರಂ ಇದ್ದು, ಸಭೆ ನಡೆಸುವಂತೆ ಅಧ್ಯಕ್ಷರಲ್ಲಿಯೂ ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯರಿಗೆ ಅಭಿವೃದ್ಧಿ ಕೆಲಸಗಳು ಬೇಕಾಗಿಲ್ಲ. ವೈಯಕ್ತಿಕ ವಿಚಾರಗಳೇ ಸಾಕು, ನಮಗೆ ಅಭಿವೃದ್ಧಿ ಕೆಲಸಗಳಾಗಬೇಕೆಂದು ಹೇಳಿದರು.

ವೀಣಾಕ್ಷಿ ನಾವು ಕೆಲಸ ಮಾಡಲು ಬಂದವರು, ಕುರ್ಚಿಗಾಗಿ ಅಲ್ಲ, ಎಲ್ಲಿ ಕುಳಿತುಕೊಂಡರೂ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು. ಆದರೆ ಅಧ್ಯಕ್ಷರು ಸಭೆ ಮುಂದೂಡುವಂತೆ ಆಯುಕ್ತರೊಂದಿಗೆ ಹೇಳಿ ತಮ್ಮ ಆಸನದಿಂದ ಕೆಳಗಿಳಿದರು.

ಮಾನ - ಮಾರ್ಯದೆ ಇಲ್ಲ..?

ಅಧ್ಯಕ್ಷರು ದಿಢೀರಾಗಿ ಆಸನದಿಂದ ಇಳಿದು ಹೊರಡುವದನ್ನು ಗಮನಿಸಿದ ಹಿರಿಯ ಸದಸ್ಯ ಕೆ.ಎಸ್. ರಮೇಶ್ ‘ಇದೇನು ಅಧ್ಯಕ್ಷರೇ ಸಭೆಗೆ ಮಾನ - ಮರ್ಯಾದೆ ಇಲ್ವ, ಸೀದಾ ಇಳಿದು ಹೋಗುತ್ತಿದ್ದೀರಾ?’ ಎಂದು ಪ್ರಶ್ನಿಸಿದರು. ಇದರಿಂದ ಕೆಂಡಾಮಂಡಲವಾದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಕೆಳಗಿಳಿದು ಸದಸ್ಯರ ಮೇಜಿನ ಬಳಿ ಬಂದು ‘ಯಾರಿಗೆ ಹೇಳ್ತಿದ್ದೀರಾ ಮಾನ - ಮರ್ಯಾದೆ ಇಲ್ಲವೆಂದು, ನೀವು ಹೇಳಿದನ್ನೆಲ್ಲ ಕೇಳಿಕೊಂಡು ಇರೊಕ್ಕಲ್ಲ ನಾನಿರೋದು’ ಎಂದು ಹೇಳಿದರು. ‘ಎಲ್ಲಿಗೆ ಹೋಗ್ತಿದ್ದೀರಾ’ ಎಂದು ಕೇಳಿದಾಗ ‘ಸಭೆ ಮುಂದೂಡಿದ್ದೇನೆ’ ಎಂದು ಅಧ್ಯಕ್ಷರು ಉತ್ತರಿಸಿದರು. ‘ಅದನ್ನು ಸಭೆಗೆ ಹೇಳಿ, ನಿಮ್ಮಿಷ್ಟಕ್ಕೆ ಎದ್ದು ಹೋಗುವದಲ್ಲ’ ಎಂದು ಸದಸ್ಯರು ಹೇಳಿದರು. ಮತ್ತೆ ತಮ್ಮ ಆಸನಕ್ಕೆ ಮರಳಿದ ಅಧ್ಯಕ್ಷರು ‘ಸಭೆಯನ್ನು ನಾಳೆ ಬೆಳಿಗ್ಗೆ 11.30 ಗಂಟೆಗೆ ಮುಂದೂಡಲಾಗಿದೆ’ ಎಂದು ಹೇಳಿ ಇಳಿದು ಹೋದರು.

ಈ ಸಂದರ್ಭ ‘ಯಾವ ಕಾರಣಕ್ಕೆ ಸಭೆ ಮುಂದೂಡಿದ್ದೀರಾ. ಅಭಿವೃದ್ಧಿ ಕೆಲಸವನ್ನು ಬಿಟ್ಟು ವೈಯಕ್ತಿಕ ವಿಚಾರಕ್ಕೆ ಸಭೆ ಮುಂದೂಡಿದ್ದೀರಾ, ನಾಚಿಕೆಯಾಗಬೇಕು ನಿಮಗೆ’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು. ಸದಸ್ಯೆ ವೀಣಾಕ್ಷಿ ‘ಅಧ್ಯಕ್ಷರೆಂದ ಮೇಲೆ ಗೌರವಯುತವಾಗಿ ಇರಬೇಕು, ನಾವೇನು ನಮ್ಮ ಮನೆ ಕೆಲಸಕ್ಕೆ ಬಂದಿಲ್ಲ’ ಎಂದು ಛೇಡಿಸಿದರು.

ಮತ್ತೆ ಆಗಮನ

ಅಧ್ಯಕ್ಷರು ಹೊರ ನಡೆದ ಬಳಿಕ ವಿಚಾರ ತಿಳಿದ ಕಾಂಗ್ರೆಸ್ ಸದಸ್ಯರು ಗಳು ಮತ್ತೆ ಸಭಾಂಗಣಕ್ಕೆ ಬಂದರು. ‘ಅಧ್ಯಕ್ಷರಿಗೆ ಮಾನ - ಮರ್ಯಾದೆ ಇಲ್ಲವೆಂದು ಹೇಳಿದವ ರಾರು..? ನಿಮಗೇನು ಯೋಗ್ಯತೆ ಇದೆ..?’ ಎಂದು ಪ್ರಶ್ನಿಸಿದರು. ಈ ಸಂದರ್ಭ ‘ತಿರುಗಿಬಿದ್ದ ಬಿಜೆಪಿ ಸದಸ್ಯರುಗಳು ‘ಏನು ಹೊಡೆದಾಟಕ್ಕೆ ರೌಡಿಗಳನ್ನು ಕರೆ ತಂದಿದ್ದೀರಾ. ನಾವು ಹೇಳಿದ್ದು ಸಭೆಗೆ ಅಧ್ಯಕ್ಷರಿಗಲ್ಲ, ಚಿಲ್ಲರೆ ರಾಜಕೀಯ ನಿಮ್ಮದು’ ಎಂದು ಹೇಳಿದರು.

ಆಗ ತಾನೇ ಬಂದಿದ್ದ ಹಿರಿಯ ಸದಸ್ಯ ಕೆ.ಎಂ. ಗಣೇಶ್ ಅವರಲ್ಲಿ ವಿಚಾರವನ್ನು ಅರುಹಿದರು. ವಿಷಯ ತಿಳಿದ ಗಣೇಶ್ ಹಾಗೂ ಚುಮ್ಮಿ ದೇವಯ್ಯ ಅವರುಗಳು ‘ಸಣ್ಣ ವಿಚಾರಕ್ಕೆ ಬಹಿಷ್ಕಾರ ಹಾಕುವದು ಸರಿಯಲ್ಲ. ನಾವುಗಳೇ ಸರಿಪಡಿಸಿ ಕೊಳ್ಳಬೇಕು’ ಎಂದು ಕೋರಿದರೂ ಯಾರೂ ಕೇಳದರೂ ಸಭೆಯಿಂದ ಹೊರಡಲು ಮುಂದಾದರು.

ಅಷ್ಟರಲ್ಲಿ ಸಭೆ ನಡೆಸಲು ಮುಂದಾದ ಬಿಜೆಪಿ ಸದಸ್ಯರು ಅಧ್ಯಕ್ಷರ ಅನುಪಸ್ಥಿತಿಯೊಂದಿಗೆ ಉಪಾಧ್ಯಕ್ಷರು ಸಭೆ ನಡೆಸಬಹುದೆಂದು ಹೇಳಿದಾಗ ನಂದಕುಮಾರ್ ‘ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ ನೋಡ್ಕೊಳ್ಳಿ’ ಎಂದು ಹೇಳಿದರು.

ಪಿ.ಡಿ. ಪೊನ್ನಪ್ಪ ಅವರು ‘ಅಧ್ಯಕ್ಷರು ಕಾಂಗ್ರೆಸ್ ಅಧ್ಯಕ್ಷರಂತೆ ಆಗಿದ್ದಾರೆ. ಇದು ಕಾಂಗ್ರೆಸ್ ಸಭೆ ಎಂದು ತಿಳಿದಿದ್ದಾರೆ’ ಎಂದು ಛೇಡಿಸಿದರು.

ಸದಸ್ಯ ರಮೇಶ್ ‘ಕಾನೂನು ನಮಗೂ ಗೊತ್ತಿದೆ, ತಾನು ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭ ಅಧ್ಯಕ್ಷರು ತನ್ನ ವಾರ್ಡ್ ನೋಡಿಕೊಳ್ಳುವಂತೆ ಹೇಳಿದ್ದಾರೆ. ವಾರ್ಡ್ ನೋಡಿಕೊಳ್ಳಲು ಒಂದು ರೂಪಾಯಿ ಅನುದಾನ ಕೂಡ ಇಲ್ಲ. ನಾಚಿಕೆಯಾಗಬೇಕು. ವಾರ್ಡ್ ನಾನು ಹೋಗಿ ಗುಡಿಸುವದಾ?’ ಎಂದು ಹೇಳಿದರು.

ವಿಪಕ್ಷದಿಂದ ಧಿಕ್ಕಾರ

ಆಡಳಿತಾರೂಢ ಸದಸ್ಯರು ಸಭೆಯಿಂದ ಹೊರ ನಡೆದ ಬಳಿಕ ಬಿಜೆಪಿ ಸದಸ್ಯರು ಸದನದ ಬಾವಿಯೆದುರು ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ಮಹಿಳೆಯರಿಗೆ ಗೌರವ ನೀಡದ ಆಡಳಿತ ಪಕ್ಷ ಹಾಗೂ ಸದಸ್ಯರುಗಳ ಕೈಗೊಂಬೆಯಾಗಿರುವ ಆಡಳಿತಕ್ಕೆ ಧಿಕ್ಕಾರ ಕೂಗಿ ಉಪಾಧ್ಯಕ್ಷರ ಕೊಠಡಿಗೆ ತೆರಳಿದರು.

- ಕುಡೆಕಲ್ ಸಂತೋಷ್