ಮಡಿಕೇರಿ, ಸೆ. 6: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಬೇನಾಮಿ ಪತ್ರಗಳನ್ನು ಬರೆಯುವ ಮೂಲಕ ಕೊಡಗಿನ ಕೆಲವು ವ್ಯಕ್ತಿಗಳನ್ನು ತೇಜೋವಧೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೊಡಗು ಸಮಾಚಾರ ವಾರಪತ್ರಿಕೆಯ ಸಂಪಾದಕ ಮನು ಶೆಣೈ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎನ್‍ಸಿಯ ಕೆಲವು ನಿರ್ಧಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸುವವರನ್ನು ಗುರಿಯಾಗಿಸಿಕೊಂಡು ನಕ್ಸಲ್ ಬೆಂಬಲಿತರು ಎಂದು ಆರೋಪಿಸುವ ಮೂಲಕ ತೇಜೋವಧೆ ಮಾಡಲಾಗುತ್ತಿದೆ. ಬೇನಾಮಿ ಪತ್ರ ಬರೆಯುತ್ತಿರುವ ನಾಚಪ್ಪ ವಿರುದ್ಧ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು. ಸಿರಿಮನೆ ನಾಗರಾಜು ಅವರು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದಾಗ ಕೊಡಗು ಪ್ರತ್ಯೇಕ ರಾಜ್ಯದ ಹೋರಾಟ ನಡೆಸುತ್ತಿದ್ದ ಎನ್.ಯು. ನಾಚಪ್ಪ ಅವರು ನಾಗರಾಜು ಅವರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಸರ್ಕಾರ ನಾಗರಾಜು ಅವರಿಗೆ ಕ್ಷಮಾಧಾನ ನೀಡಿದ ನಂತರ ನಾವುಗಳು ಅವರ ಸಂಪರ್ಕ ಸಾಧಿಸಿದೆವು ಎಂದು ಮನುಶೆಣೈ ಸ್ಪಷ್ಟಪಡಿಸಿದರು.
ನಾಚಪ್ಪ ಅವರ ಆದಾಯದ ಮೂಲವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ ಅವರು ಉನ್ನತ ಮಟ್ಟದ ತನಿಖಾ ತಂಡಗಳನ್ನು ಸ್ಥಾಪಿಸುವದಕ್ಕಾಗಿ ಸಿಎನ್‍ಸಿ ಮಾಡಿರುವ ಒತ್ತಾಯ ಸ್ವಾಗತಾರ್ಹವೆಂದರು. ಈ ತನಿಖಾ ತಂಡಗಳ ಮೂಲಕ ಸಿಎನ್‍ಸಿ ಚಟುವಟಿಕೆಗಳು ಬಯಲಾಗಲಿದೆ ಎಂದು ಮನು ಶೆಣೈ ಅಭಿಪ್ರಾಯಪಟ್ಟರು. ಈಡೇರದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿಗಳನ್ನು ನಡೆಸುತ್ತಿರುವ ಸಿಎನ್‍ಸಿ ಸಂಘಟನೆ ದೇವಟ್ ಪರಂಬು ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದರು. ವೈಯಕ್ತಿಕ ತೇಜೋವಧೆಯನ್ನು ನಿಲ್ಲಿಸದಿದ್ದಲ್ಲಿ ನೇರವಾಗಿ ಕಾನೂನು ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕೊಡಗು ಸಮಾಚಾರ ಪತ್ರಿಕೆಯ ವರದಿಗಾರ ಕೇಶವ ಕಾಮತ್ ಉಪಸ್ಥಿತರಿದ್ದರು.